×
Ad

ಉ.ಪ್ರದೇಶ: ಅತ್ಯಾಚಾರ ಪ್ರಕರಣ: 4 ಪೊಲೀಸ್ ಅಧಿಕಾರಿಗಳ ಅಮಾನತು

Update: 2021-03-12 23:03 IST
ಸಾಂದರ್ಭಿಕ ಚಿತ್ರ

ಲಕ್ನೊ, ಮಾ.12: 13 ವರ್ಷದ ಹುಡುಗಿಯ ಮೇಲಿನ ಅತ್ಯಾಚಾರ ಪ್ರಕರಣ ಹಾಗೂ ಸಂತ್ರಸ್ತೆಯ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿದ ಕಾರಣಕ್ಕೆ 4 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಡಿಐಜಿ ಪ್ರೀತಿಂದರ್ ಸಿಂಗ್ ಹೇಳಿದ್ದಾರೆ.

ಮತ್ತೊಬ್ಬ ಪೊಲೀಸ್ ಅಧಿಕಾರಿ ದೇವೇಂದ್ರ ಯಾದವ್‌ನ ಪುತ್ರರು ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅನುಮತಿ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಯಾದವ್‌ರನ್ನೂ ಅಮಾನತು ಮಾಡಲಾಗಿದೆ ಎಂದು ವರದಿ ಹೇಳಿದೆ.

ಅತ್ಯಾಚಾರ ಆರೋಪದ ಪ್ರಕರಣದಲ್ಲಿ ನಿರ್ಲಕ್ಷ ತೋರಿದ್ದಕ್ಕಾಗಿ ಸಜೇಟಿ ಪೊಲೀಸ್ ಠಾಣೆಯ ಅಧಿಕಾರಿ ರಾಮ್ ಶಿರೋಮಣಿ ಮತ್ತು ಕಾನ್‌ಸ್ಟೆಬಲ್ ಆದೇಶ್ ಕುಮಾರ್‌ರನ್ನು ಅಮಾನತುಗೊಳಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆಯ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ನಿರ್ಲಕ್ಷ ತೋರಿದ್ದಕ್ಕಾಗಿ ಘಟಮ್‌ಪುರ ಪೊಲೀಸ್ ಠಾಣೆಯ ಅಧಿಕಾರಿ ಅಬ್ದುಲ್ ಕಲಾಂರನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್ ಅಧಿಕಾರಿ ದೇವೇಂದ್ರ ಯಾದವ್‌ನನ್ನು ಜಲೌನ್ ಜಿಲ್ಲೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ ಮತ್ತು ಅನುಮತಿ ಪಡೆಯದೆ ಗೈರುಹಾಜರಾಗಿರುವುದರಿಂದ ಅಮಾನತುಗೊಳಿಸಲಾಗಿದೆ ಎಂದು ಕನೌಜ್ ಪೊಲೀಸ್ ಅಧೀಕ್ಷಕ ಪ್ರಶಾಂತ್ ವರ್ಮ ಹೇಳಿದ್ದಾರೆ.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತನಿಖೆ ನಡೆಸಿ ವರದಿ ಒಪ್ಪಿಸಲು ಪೊಲೀಸ್ ಅಧೀಕ್ಷಕ(ಗ್ರಾಮೀಣ) ಬೃಜೇಶ್ ಶ್ರೀವಾಸ್ತವಗೆ ಸೂಚಿಸಲಾಗಿದೆ ಎಂದವರು ಹೇಳಿದ್ದಾರೆ.

ಅತ್ಯಾಚಾರ ಸಂತ್ರಸ್ತೆ ವೈದ್ಯಕೀಯ ತಪಾಸಣೆಗೆ ದಾಖಲಾಗಿದ್ದ ಆಸ್ಪತ್ರೆಯ ಹೊರಭಾಗದಲ್ಲಿ ಲಾರಿಯೊಂದು ಡಿಕ್ಕಿಯಾಗಿ ಸಂತ್ರಸ್ತೆಯ ತಂದೆ ಮೃತಪಟ್ಟಿದ್ದರು. ಪೊಲೀಸ್ ಅಧಿಕಾರಿ ದೇವೇಂದ್ರ ಯಾದವ್‌ರ ಸೂಚನೆಯಂತೆ ಈ ಷಡ್ಯಂತ್ರ ರಚಿಸಿ ಹುಡುಗಿಯ ತಂದೆಯನ್ನು ಸಾಯಿಸಲಾಗಿದೆ ಎಂದು ಮೃತ ವ್ಯಕ್ತಿಯ ಕುಟುಂಬದವರು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾನ್ಪುರ-ಸಾಗರ್ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿಗಳಾದ ದೀಪು ಯಾದವ್ ಹಾಗೂ ಗೋಲು ಯಾದವ್‌ರನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಒಡ್ಡಿದ ಆರೋಪಿ ಸೌರಭ್ ಯಾದವ್‌ನನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News