ಐಷಾರಾಮಿ ರೈಲು ಯಾರಿಗೆ?

Update: 2021-03-12 18:02 GMT

ಮಾನ್ಯರೇ,

ಭಾರತೀಯ ರೈಲ್ವೆ ಇಲಾಖೆಯು ಇದೀಗ ರಾಜ್ಯದಲ್ಲೂ ‘ಗೋಲ್ಡನ್ ಚಾರಿಯಟ್’ ಎಂಬ ಐಷಾರಾಮಿ ರೈಲು ಆರಂಭಿಸಲು ಸಿದ್ಧತೆ ನಡೆಸಿದೆ. ಆದರೆ ಈ ರೈಲಿನಲ್ಲಿ ಒಬ್ಬ ಬಡ ರೈತ, ಒಬ್ಬ ಕೂಲಿ ಕಾರ್ಮಿಕ, ಬೀದಿ ಬದಿಯ ಚಿಲ್ಲರೆ ವ್ಯಾಪಾರಿ, ಪೌರ ಕಾರ್ಮಿಕರು ಪ್ರಯಾಣಿಸಲು ಖಂಡಿತ ಸಾಧ್ಯ ಇಲ್ಲ. ಇದು ಉಳ್ಳವರ ಆರಾಮದಾಯಕ ಬದುಕಿನ ಬಗ್ಗೆ ಸರಕಾರದ ಮತ್ತೊಂದು ಸೂಕ್ಷ್ಮಯೋಚನೆಯಷ್ಟೆ. ಅದಕ್ಕಿಂತ ಜನಸಾಮಾನ್ಯರು ಸಂಚರಿಸುವ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಬಡವರಿಗೆ ಉಪಯೋಗವಾಗುತ್ತಿತ್ತಲ್ಲವೇ? ಇವತ್ತಿಗೂ ದೇಶದಲ್ಲಿ ಅದೆಷ್ಟೋ ಹಳ್ಳಿಗಳಿಗೆ ಸಾರಿಗೆ-ಸಂಪರ್ಕ ವ್ಯವಸ್ಥೆಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ‘‘ದೇಶ ನಗರಗಳಲ್ಲಿ ಇಲ್ಲ, ಅದು ಹಳ್ಳಿಗಳಲ್ಲಿದೆ’’ ಎಂದು ಗಾಂಧೀಜಿಯವರು ಹೇಳಿರುವ ಮಾತಿನ ಹಿಂದೆ ಜನಸಾಮಾನ್ಯರ ಪರ ಕಾಳಜಿ, ಹಿತಾಸಕ್ತಿ ಮತ್ತು ದೇಶದ ಅಭಿವೃದ್ಧಿಯ ಮಾನದಂಡ ಅಡಗಿತ್ತು. ಆದರೆ ಪ್ರಭುತ್ವದ ಆಡಳಿತದಲ್ಲಿ ಹಳ್ಳಿಗಳ ಅಭಿವೃದ್ಧಿ ಕಡೆಗಣನೆಯಾಗುತ್ತಿದೆ. ಬಹುಸಂಖ್ಯಾತ ಹಳ್ಳಿಯ ಜನಸಾಮಾನ್ಯರ ಕಡೆಗಣನೆಯೆಂದರೆ ಗಾಂಧೀಜಿಯವರ ಕನಸಿನ ಅಭಿವೃದ್ಧಿಯ ಭಾರತದ ಕಡೆಗಣನೆ ಎಂತಲೇ ಅರ್ಥ.

ಐಷಾರಾಮಿ ಎಂಬುದೇ ಜನಸಾಮಾನ್ಯರ ಬದುಕನ್ನು ಅಣಕಿಸುವಂತಹ ಪದ. ಉಳ್ಳವರ ಪರವಾಗಿ ಸರಕಾರ ಯೋಚಿಸುವ ಅಗತ್ಯವಿಲ್ಲ. ಅದರ ಬದಲು ಸರಕಾರ ಜನಸಾಮಾನ್ಯರ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಗಮನ ಹರಿಸಿ, ಪ್ರಜಾಪ್ರಭುತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಬೇಕಿದೆ.

Writer - -ನಾಗೇಶ್ ಹರಳಯ್ಯ, ಕಲಬುರಗಿ

contributor

Editor - -ನಾಗೇಶ್ ಹರಳಯ್ಯ, ಕಲಬುರಗಿ

contributor

Similar News