ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಲು ಕೊಹ್ಲಿ ಪಡೆ ಚಿಂತನೆ

Update: 2021-03-13 18:51 GMT

ಅಹಮದಾಬಾದ್: ಸರಣಿಯ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿರುವ ಭಾರತ ರವಿವಾರ ಇಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಸುಧಾರಿಸುವ ಪ್ರಯತ್ನವನ್ನು ಹೊಂದಿದೆ.

 ಮೂರು ತಿಂಗಳ ಅವಧಿಯಲ್ಲಿ ಭಾರತ ಆಡಿದ ಮೊದಲ ಸೀಮಿತ ಓವರ್‌ಗಳ ಪಂದ್ಯದಲ್ಲಿ ಕೈ ಸುಟ್ಟುಕೊಂಡಿದೆ.ಲೋಕೇಶ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ಯಜುವೇಂದ್ರ ಚಹಾಲ್ ಅವರಂತಹ ಕೆಲವು ಪ್ರಮುಖ ಆಟಗಾರರ ವೈಫಲ್ಯದಿಂದಾಗಿ ಭಾರತ ಸೋಲು ಅನುಭವಿಸಿತ್ತು.

 ಕಳಪೆ ಬ್ಯಾಟಿಂಗ್ ಮತ್ತು ದುರ್ಬಲ ಬೌಲಿಂಗ್ ಕಾರಣದಿಂದಾಗಿ ಭಾರತ ಮೊದಲ ಪಂದ್ಯದಲ್ಲಿ ವಿಫಲಗೊಂಡಿತ್ತು. ಆದರೆ ಒಂದು ಸೋಲು ಎಂದಿಗೂ ಕಥೆಯ ಅಂತ್ಯವಲ್ಲ ಮತ್ತು ಒಂದು ಪಂದ್ಯದಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಯಾವುದೇ ತಂಡದ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ. ನಾಯಕ ವಿರಾಟ್ ಕೊಹ್ಲಿ ಆಟಗಾರರ ಪ್ರದರ್ಶನದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಿಷಭ್ ಪಂತ್ ಮತ್ತು ಪಾಂಡ್ಯ ಅವರಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಇದು ಒಂದು ಧೈರ್ಯಶಾಲಿ ರಿವರ್ಸ್ ಸ್ವೀಪ್ (ಜೋಫ್ರಾ ಆರ್ಚರ್ ಎಸೆತದಲ್ಲಿ ಪಂತ್ ಸಿಕ್ಸರ್) ಗೆ ಸೀಮಿತವಾಗಿರಬಾರದು ಅಥವಾ ಬೀಳುವ ರಾಂಪ್ ಶಾಟ್‌ಗೆ (ಬೆನ್ ಸ್ಟೋಕ್ಸ್ ಎಸೆತದಲ್ಲಿ ಪಾಂಡ್ಯ ಬೌಂಡರಿ) ಸೀಮಿತಗೊಳಿಸಬಾರದು ಎಂದು ಕೊಹ್ಲಿ ಹೇಳಿದ್ದಾರೆ. ಶ್ರೇಯಸ್ ಅಯ್ಯರ್ 48 ಎಸೆತಗಳಲ್ಲಿ 67 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಆರ್ಚರ್ ಮತ್ತು ಮಾರ್ಕ್ ವುಡ್‌ರ ವೇಗ ಹಾಗೂ ನಿಖರ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪಾಂಡ್ಯ ಮತ್ತು ಪಂತ್‌ಗೆ ಸಾಧ್ಯವಾಗಲಿಲ್ಲ. ಪಾಂಡ್ಯ (21 ಎಸೆತಗಳಲ್ಲಿ 19) ಮತ್ತು ಪಂತ್ (23 ಎಸೆತಗಳಲ್ಲಿ 21) ಎರಡಂಕೆಯ ಕೊಡುಗೆ ನೀಡಿದರು.

ಮೊದಲ ಪಂದ್ಯದಲ್ಲಿ ಸೋತಿರುವ ಕಾರಣದಿಂದಾಗಿ ಎರಡನೇ ಪಂದ್ಯದ ಅಂತಿಮ ಹನ್ನೊಂದರಲ್ಲಿ ಕೆಲವು ಬದಲಾವಣೆಯ ಬಗ್ಗೆ ಕೊಹ್ಲಿ ಸುಳಿವು ನೀಡಿದ್ದಾರೆ. ತಂಡದ ಹಿರಿಯ ಸದಸ್ಯ ಶಿಖರ್ ಧವನ್ ಅವರು 12 ಎಸೆತಗಳಲ್ಲಿ 4 ರನ್ ಗಳಿಸಿದ್ದಾರೆ. ಅವರಿಗೆ ಎರಡನೇ ಪಂದ್ಯದಲ್ಲಿ ಅವಕಾಶ ನೀಡುವ ಬಗ್ಗೆ ಕೊಹ್ಲಿ ಹೇಳಿಲ್ಲ. ಸತತ 6 ಟೆಸ್ಟ್ ಪಂದ್ಯಗಳನ್ನು ಆಡಿದ ರೋಹಿತ್ ಶರ್ಮಾರಿಗೆ ಒಂದೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡುವ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ. ಆಸ್ಟ್ರೇಲಿಯದ ಪ್ರವಾಸದ ಆರಂಭದಲ್ಲಿ 14 ದಿನಗಳ ಕಾಲ ಕಠಿಣ ಸಂಪರ್ಕತಡೆಯನ್ನು ರೋಹಿತ್ ಶರ್ಮಾ ಅನುಭವಿಸಿದ್ದರು. ಆದರೆ ರೋಹಿತ್ ಅವರ ಉಪಸ್ಥಿತಿಯು ಅಗ್ರಸರದಿಯಲ್ಲಿ ಬಹಳ ಅವಶ್ಯಕವಾಗಿದೆ.

ಬೌಲಿಂಗ್ ವಿಭಾಗವು ಬಲಿಷ್ಠವಾಗಿ ಇಲ್ಲ. ಈ ಕಾರಣದಿಂದಾಗಿ ಯಜುವೇಂದ್ರ ಚಹಾಲ್ ಮತ್ತು ರಾಹುಲ್ ತಿವಾಟಿಯಾಗೆ ದಾರಿ ಸುಗಮವಾಗಬಹುದು. ಇಂಗ್ಲೆಂಡ್ ತಂಡವು ಈ ವರ್ಷದ ಅಕ್ಟೋಬರ್‌ನಲ್ಲಿ ಟ್ವೆಂಟಿ-20 ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವ ಕಡೆಗೆ ಕಣ್ಣಿಟ್ಟಿದ್ದು, ಭಾರತ ತಂಡದಲ್ಲಿ ಸುಧಾರಣೆಯಾಗದಿದ್ದರೆ ಅವರ ತಯಾರಿಗೆ ಈ ಸರಣಿ ಹೆಚ್ಚು ಅನುಕೂಲವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News