ಮಹಿಳೆಯರ ಏಕದಿನ ಕ್ರಿಕೆಟ್: 7,000 ರನ್ ಪೂರೈಸಿದ ಮೊದಲ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್

Update: 2021-03-14 07:06 GMT

ಹೊಸದಿಲ್ಲಿ: ಮಹಿಳೆಯರ ಏಕದಿನ ಕ್ರಿಕೆಟ್‍ನಲ್ಲಿ 7,000 ರನ್ ಪೂರೈಸಿರುವ ಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಭಾರತದ ಮಿಥಾಲಿ ರಾಜ್ ಪಾತ್ರರಾಗಿದ್ದಾರೆ.

ರವಿವಾರ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಪಂದ್ಯದ ವೇಳೆ ಮಿಥಾಲಿ ಈ ಸಾಧನೆ ಮಾಡಿದರು. ಈ ಮೂಲಕ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡರು.

ಲಕ್ನೊದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಪೂನಂ ರಾವತ್ ಅವರೊಂದಿಗೆ ಜೊತೆಯಾಟ ನಡೆಸಿದ ಮಿಥಾಲಿ 7,000 ರನ್ ಪೂರೈಸಿದರು. ರವಿವಾರ ಈ ಮೈಲುಗಲ್ಲು ತಲುಪಲು ಮಿಥಾಲಿಗೆ 26 ರನ್ ಅಗತ್ಯವಿತ್ತು. 

ದ.ಆಫ್ರಿಕಾ ವಿರುದ್ಧ ಮೂರನೇ ಪಂದ್ಯದಲ್ಲಿ ಮಿಥಾಲಿ ಅವರು ಅಂತರ್ ರಾಷ್ಟ್ರೀಯ ಕ್ರಿಕೆಟಿನಲ್ಲಿ 10,000 ರನ್ ಪೂರೈಸಿದ ಭಾರತದ ಮೊದಲ ಹಾಗೂ ವಿಶ್ವದ 2ನೇ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದರು.

ಮಹಿಳೆಯರ ಏಕದಿನ ಕ್ರಿಕೆಟಿನ ಗರಿಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ ಮಿಥಾಲಿ ರಾಜ್ ಮಾಜಿ ಇಂಗ್ಲೆಂಡ್ ಆಟಗಾರ್ತಿ ಚಾರ್ಲೊಟ್ ಎಡ್ವಡ್ಸ್  ಗಿಂತ ಮುಂದಿದ್ದಾರೆ. ಎಡ್ವಡ್ರ್ಸ್ ಸುಮಾರು 2 ದಶಕಗಳ ವೃತ್ತಿಜೀವನದಲ್ಲಿ 5,992 ರನ್ ಗಳಿಸಿದ್ದರು.

ಮಹಿಳೆಯರ ಅಂತರ್ ರಾಷ್ಟ್ರೀಯ ಕ್ರಿಕೆಟಿನಲ್ಲಿ ಎಡ್ವಡ್ಸ್ ಒಟ್ಟು 10,273 ರನ್ ಗಳಿಸಿ ಗರಿಷ್ಟ ಸ್ಕೋರರ್ ಆಗಿದ್ದಾರೆ. ಮಿಥಾಲಿ ರಾಜ್ ಈ ದಾಖಲೆಯನ್ನು ಮುರಿಯುವತ್ತ ಚಿತ್ತಹರಿಸಿದ್ದಾರೆ.

ಮಿಥಾಲಿ ರಾಜ್ 213ನೇ ಏಕದಿನ ಪಂದ್ಯವನ್ನಾಡಿದ್ದಾರೆ. 38ರ ವಯಸ್ಸಿನ ಮಿಥಾಲಿ 1999ರಲ್ಲಿ ಐರ್ಲೆಂಡ್ ಮಹಿಳಾ ತಂಡದ ವಿರುದ್ಧ ಚೊಚ್ಚಲ ಪಂದ್ಯವನ್ನ್ಣಾಡಿದ್ದರು. 54 ಅರ್ಧಶತಕಗಳನ್ನು ಗಳಿಸಿರುವ ಮಿಥಾಲಿ, 7  ಶತಕಗಳನ್ನು ಗಳಿಸಿದ್ದಾರೆ. 2018ರಲ್ಲಿ ಶ್ರೀಲಂಕಾದ ವಿರುದ್ದ ಗರಿಷ್ಟ ವೈಯಕ್ತಿಕ ಸ್ಕೋರ್ 125 ರನ್ ಗಳಿಸಿದ್ದಾರೆ. 

ಮಿಥಾಲಿ 89 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 2019ರ ಸೆಪ್ಟಂಬರ್ ನಲ್ಲಿ ಟಿ-20ಯಿಂದ ನಿವೃತ್ತಿಯಾಗಿದ್ದರು. ಟಿ-20ಯಲ್ಲಿ ಮಿಥಾಲಿ 17 ಅರ್ಧಶತಕಗಳನ್ನು ಗಳಿಸಿದ್ದರು. ಗರಿಷ್ಠ ಔಟಾಗದೆ 97 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News