ಎರಡನೇ ಟ್ವೆಂಟಿ-20: ಭಾರತಕ್ಕೆ ಜಯ, ಸರಣಿ ಸಮಬಲ

Update: 2021-03-14 17:15 GMT

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.

 ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು. ಇಂಗ್ಲೆಂಡ್ ತಂಡ ಭಾರತದ ಗೆಲುವಿಗೆ 165 ರನ್ ಗುರಿ ನೀಡಿತು.

ಗೆಲ್ಲಲು ಸವಾಲಿನ ಮೊತ್ತ ಬೆನ್ನಟ್ಟಿದ ಭಾರತವು ಆರಂಭಿಕ ಬ್ಯಾಟ್ಸ್ ಮನ್ ರಾಹುಲ್ ರನ್ನು ಶೂನ್ಯಕ್ಕೆ ಕಳೆದುಕೊಂಡಿದ್ದರೂ  ಇನ್ನೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್(56, 32 ಎಸೆತ, 5 ಬೌಂಡರಿ, 4 ಸಿಕ್ಸರ್), ವಿರಾಟ್ ಕೊಹ್ಲಿ(ಔಟಾಗದೆ 73, 49 ಎಸೆತ, 5 ಬೌಂಡರಿ, 3 ಸಿಕ್ಸರ್) ಸಿಡಿಸಿದ ಅರ್ಧಶತಕದ ಕೊಡುಗೆಯ ನೆರವಿನಿಂದ ಚೇತರಿಸಿಕೊಂಡಿತು. 17.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು.

ನಾಯಕ ಕೊಹ್ಲಿ ಬೌಲರ್ ಕ್ರಿಸ್ ಜೋರ್ಡನ್ ಎಸೆತವನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ಗೆಲುವಿನ ವಿಧಿವಿಧಾನ ಪೂರೈಸಿದರು.

ಇದಕ್ಕೂ ಮೊದಲು ಆರಂಭಿಕ ಬ್ಯಾಟ್ಸ್ ಮನ್ ಜೇಸನ್ ರಾಯ್ ಏಕಾಂಗಿ ಹೋರಾಟದ(46 ರನ್)ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News