ನೋಟಾ ಮತಗಳು ಅತ್ಯಧಿಕವಾಗಿದ್ದರೆ ಹೊಸತಾಗಿ ಚುನಾವಣೆ ನಡೆಸಬೇಕೆಂದು ಕೋರಿ ಪಿಐಎಲ್
ಹೊಸದಿಲ್ಲಿ,ಮಾ.15: ನಿರ್ದಿಷ್ಟ ಮತಕ್ಷೇತ್ರದಲ್ಲಿ ಗರಿಷ್ಠ ಚಲಾವಣೆಯಾದ ಮತಗಳು ನೋಟಾ (ನನ್ ಆಫ್ ದಿ ಅಬವ್) ವರ್ಗಕ್ಕೆ ಸೇರಿದ್ದರೆ ಅಂತಹ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶವನ್ನು ಕೋರಿ ನ್ಯಾಯವಾದಿ ಹಾಗೂ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್‌ಗಳನ್ನು ಹೊರಡಿಸಿದೆ.
ಚುನಾವಣೆ ರದ್ದುಗೊಂಡ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಪಕ್ಷಗಳು ಮರುಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡುವಂತೆಯೂ ಅರ್ಜಿದಾರರು ಕೋರಿದ್ದಾರೆ.
ಅಭ್ಯರ್ಥಿಗಳನ್ನು ತಿರಸ್ಕರಿಸುವ ಮತ್ತು ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಕ್ಕು ಜನರಿಗೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಲು ಅಧಿಕಾರವನ್ನು ನೀಡುತ್ತದೆ. ಕಣದಲ್ಲಿರುವ ಅಭ್ಯರ್ಥಿಗಳ ಹಿನ್ನೆಲೆ ಮತ್ತು ಸಾಧನೆ ಮತದಾರರಿಗೆ ತೃಪ್ತಿಯನ್ನು ನೀಡದಿದ್ದರೆ ಅವರು ಅಂತಹ ಅಭ್ಯರ್ಥಿಗಳನ್ನು ತಿರಸ್ಕರಿಸಿ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನೋಟಾ ಮತ ಚಲಾವಣೆಯ ಹಕ್ಕನ್ನು ಬಳಸಿಕೊಳ್ಳುತ್ತಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.