ಬಾಟ್ಲಾ ಹೌಸ್‌ ಎನ್‌ ಕೌಂಟರ್ ಪ್ರಕರಣ: ಆರಿಝ್‌ ಖಾನ್‌ ಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ‌

Update: 2021-03-15 15:23 GMT

ಹೊಸದಿಲ್ಲಿ,ಮಾ.15: ಬಾಟ್ಲಾ ಹೌಸ್ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸ್‌ನ ವಿಶೇಷ ಘಟಕದ ಇನ್‌ಸ್ಪೆಕ್ಟರ್ ಮೋಹನಚಂದ್ ಶರ್ಮಾ ಅವರ ಹತ್ಯೆ ಮತ್ತು ಇತರ ಅಪರಾಧಗಳಿಗಾಗಿ ದೋಷಿ ಎಂದು ಘೋಷಿಸಲ್ಪಟ್ಟಿರುವ ಆರಿಝ್ ಖಾನ್‌ಗೆ ದಿಲ್ಲಿಯ ಸಾಕೇತ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಸೋಮವಾರ ಗಲ್ಲು ಶಿಕ್ಷೆಯನ್ನು ಪ್ರಕಟಿಸಿದೆ.

ಶಿಕ್ಷೆಯನ್ನು ಪ್ರಕಟಿಸಿದ ನ್ಯಾ.ಸಂದೀಪ್ ಯಾದವ್,ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ ಎಂದು ಹೇಳಿದರು.

ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾಗಿರುವ ಖಾನ್‌ಗೆ ಮರಣ ದಂಡನೆಯನ್ನು ವಿಧಿಸುವಂತೆ ಪೊಲೀಸರು ನ್ಯಾಯಾಲಯವನ್ನು ಕೋರಿದ್ದರು. ಇದು ಕೇವಲ ಹತ್ಯೆಯಲ್ಲ,ನ್ಯಾಯದ ರಕ್ಷಣೆಯ ಹೊಣೆ ಹೊತ್ತಿದ್ದ ಕಾನೂನು ಜಾರಿ ಅಧಿಕಾರಿಯ ಹತ್ಯೆಯಾಗಿದೆ ಎಂದು ಪೊಲೀಸರು ವಾದಿಸಿದ್ದರು. ಖಾನ್ ಪರ ವಕೀಲರು ಮರಣ ದಂಡನೆಗೆ ವಿರೋಧ ವ್ಯಕ್ತಪಡಿಸಿದ್ದರು.

ಖಾನ್ ಮತ್ತು ಆತನ ಸಹಚರರು ಗುಂಡು ಹಾರಿಸಿ ಇನ್‌ಸ್ಪೆಕ್ಟರ್ ಶರ್ಮಾ ಅವರ ಹತ್ಯೆ ಮಾಡಿದ್ದರು ಎನ್ನುವುದು ಸಾಬೀತಾಗಿದೆ ಎಂದು ನ್ಯಾಯಾಲಯವು ಮಾ.8ರಂದು ತನ್ನ ತೀರ್ಪಿನಲ್ಲಿ ಹೇಳಿತ್ತು.

2008ರಲ್ಲಿ ದಕ್ಷಿಣ ದಿಲ್ಲಿಯ ಜಾಮಿಯಾ ನಗರದ ಬಾಟ್ಲಾ ಹೌಸ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದ ಉಗ್ರರು ಮತ್ತು ಪೊಲೀಸರ ನಡುವೆ ಸಂಭವಿಸಿದ್ದ ಗುಂಡಿನ ಕಾಳಗದಲ್ಲಿ ಶರ್ಮಾ ಕೊಲ್ಲಲ್ಪಟ್ಟಿದ್ದರು.

 ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು 2013,ಜುಲೈನಲ್ಲಿ ಮುಜಾಹಿದೀನ್ ಭಯೋತ್ಪಾದಕ ಶಹಝಾದ್ ಅಹ್ಮದ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ತೀರ್ಪಿನ ವಿರುದ್ಧ ಆತ ಸಲ್ಲಿಸಿರುವ ಮನವಿಯು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.

ಎನ್‌ಕೌಂಟರ್‌ನ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಖಾನ್‌ನನ್ನು ಘೋಷಿತ ಅಪರಾಧಿ ಎಂದು ನ್ಯಾಯಾಲಯವು ಪ್ರಕಟಿಸಿತ್ತು. 2018,ಫೆ.14ರಂದು ಖಾನ್‌ನನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News