ಆಸ್ಟ್ರೇಲಿಯ: ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಸಾವಿರಾರು ಮಹಿಳೆಯರ ಧರಣಿ
Update: 2021-03-15 20:16 IST
ಕ್ಯಾನ್‌ಬೆರ (ಆಸ್ಟ್ರೇಲಿಯ), ಮಾ. 15: ಲಿಂಗ ಸಮಾನತೆ ಮತ್ತು ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಆಸ್ಟ್ರೇಲಿಯದ ಪ್ರಮುಖ ನಗರಗಳಲ್ಲಿ ಸಾವಿರಾರು ಮಹಿಳೆಯರು ಸೋಮವಾರ ಧರಣಿ ನಡೆಸಿದರು.
ಆಸ್ಟ್ರೇಲಿಯದ ಕೆಲವು ಅತ್ಯುನ್ನತ ರಾಜಕೀಯ ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯ, ತಾರತಮ್ಯ ಮತ್ತು ದುರ್ವರ್ತನೆಗಳು ನಡೆಯುತ್ತಿವೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದ ಬಳಿಕ, ಪ್ರತಿಭಟನೆಗಳು ಮತ್ತಷ್ಟು ಕಾವು ಪಡೆದುಕೊಂಡಿವೆ.
ಆರೋಪಗಳ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವ ಎರಡು ಮನವಿಗಳನ್ನು ರಾಜಧಾನಿ ಕ್ಯಾನ್‌ಬೆರದಲ್ಲಿ ಸಂಸತ್ತಿಗೆ ಸಲ್ಲಿಸಲಾಯಿತು. ಪ್ರಧಾನಿ ಸ್ಕಾಟ್ ಮೊರಿಸನ್‌ರನ್ನು ಖಾಸಗಿಯಾಗಿ ಭೇಟಿಯಾಗುವಂತೆ ನೀಡಲಾದ ಆಹ್ವಾನವನ್ನು ಪ್ರತಿಭಟನಕಾರರು ತಿರಸ್ಕರಿಸಿದರು.
ಅಟಾರ್ನಿ ಜನರಲ್ ಕ್ರಿಶ್ಚಿಯನ್ ಪೋರ್ಟರ್ ತನ್ನ ಮೇಲೆ 1988ರಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂಬುದಾಗಿ ಇತ್ತೀಚೆಗೆ ಮಹಿಳೆಯೊಬ್ಬರು ಆರೋಪಿಸಿರುವುದು ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.