×
Ad

ನೀತಾ ಅಂಬಾನಿಯನ್ನು ಸಂದರ್ಶಕ ಪ್ರಾಧ್ಯಾಪಕಿಯನ್ನಾಗಿಸುವ ಪ್ರಸ್ತಾಪಕ್ಕೆ ವಿರೋಧ

Update: 2021-03-17 12:40 IST
ನೀತಾ ಅಂಬಾನಿ (File Photo: PTI)

ವಾರಣಾಸಿ: ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕಿ ನೀತಾ ಅಂಬಾನಿ ಅವರನ್ನು ಪ್ರತಿಷ್ಠಿತ ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕಗೊಳಿಸುವ ಪ್ರಸ್ತಾಪವೊಂದು ವಿವಿ ಕ್ಯಾಂಪಸ್ಸಿನಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿದೆ.

ವಿವಿಯ ಉಪಕುಲಪತಿ ರಾಕೇಶ್ ಭಟ್ನಾಗರ್ ಅವರ ನಿವಾಸದೆದುರು ಮಂಗಳವಾರ ಸುಮಾರು 40 ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. 

ಬನಾರಸ್ ಹಿಂದು ವಿವಿಯ ಮಹಿಳಾ ಅಧ್ಯಯನ ಮತ್ತು ಅಭಿವೃದ್ಧಿ  ಕೇಂದ್ರದ ಸಭೆ ಕಳೆದ ಶುಕ್ರವಾರ ನಡೆದಾಗ ನೀತಾ ಅಂಬಾನಿ ಅವರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಕಗೊಳಿಸುವ ಪ್ರಸ್ತಾವನೆ ಆಂತರಿಕವಾಗಿ ಮಾಡಲಾಗಿತ್ತೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

ನೀತಾ ಅಂಬಾನಿ ಈ  ಪ್ರಸ್ತಾವನೆ ಹಿಂದೆ ಯಾವುದೇ ರೀತಿಯಲ್ಲಿ ಶಾಮೀಲಾಗಿಲ್ಲ ಎಂದು  ಪ್ರತಿಭಟನಾನಿರತ ವಿದ್ಯಾರ್ಥಿಗಳ ಜತೆ ಮಾತನಾಡಿದ ಪ್ರೊಫೆಸರ್  ಹೇಳಿರುವುದು ವೀಡಿಯೋವೊಂದರಲ್ಲಿ ಕೇಳಿಸುತ್ತದೆ. ನೀತಾ ಅಂಬಾನಿ ಮತ್ತು ಇತರ ಪ್ರಭಾವಿ ಮಹಿಳಾ ನಾಯಕಿಯರ ಜತೆ ಪ್ರಮುಖವಾಗಿ ವಿವಿಯ ವಿದ್ಯಾರ್ಥಿನಿಯರು ಸಂವಾದ ನಡೆಸುವಂತಾಗಲು ಇಂತಹ ಒಂದು ಪ್ರಸ್ತಾವನೆ ಮುಂದಿಡಲಾಗಿದೆ ಎಂದು ಹೇಳಲಾಗುತ್ತಿದೆ.

"ನೀತಾ ಅಂಬಾನಿಯವರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿಸುವ ಪ್ರಸ್ತಾವನೆಯನ್ನು ವಿವಿ ಅಧಿಕಾರಿಗಳಿಗೆ ಕಳುಹಿಸಲಾಗಿದೆ,'' ಎಂದು ಪ್ರಸ್ತಾವನೆಯನ್ನು ಮುಂದಿಟ್ಟ ಸಮಿತಿಯ ಸಂಘಟಕಿ ನಿಧಿ ಶರ್ಮ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.

"ನೀತಾ ಅಂಬಾನಿ ಬನಾರಸ್ ಹಿಂದು ವಿವಿಯ ಸಂದರ್ಶಕ ಪ್ರಾಧ್ಯಾಪಕರಾಗುತ್ತಾರೆ ಎಂಬ ವರದಿಗಳು ಸುಳ್ಳು. ಅವರಿಗೆ ಯಾವುದೇ ಆಹ್ವಾನ ಬಂದಿಲ್ಲ,'' ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News