‘‘ಕೊರೋನ ಎರಡನೇ ಅಲೆಯ ಆರಂಭದಲ್ಲಿ ಮಹಾರಾಷ್ಟ್ರ’’

Update: 2021-03-17 07:26 GMT

ಹೊಸದಿಲ್ಲಿ: ಮಹಾರಾಷ್ಟ್ರ ಕೊರೋನದ ಎರಡನೇ ಅಲೆಯ ಆರಂಭದಲ್ಲಿ ಇದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಸರಕಾರಕ್ಕೆ ಬರೆದ ಪತ್ರದಲ್ಲಿ ಕೇಂದ್ರ ಸರಕಾರ ಹೇಳಿದೆ.
ಅಲ್ಲದೆ, ಕಂಟೈನ್ಮೆಂಟ್ ತಂತ್ರದ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಅದು ಮಹಾರಾಷ್ಟ್ರ ಸರಕಾರವನ್ನು ಒತ್ತಾಯಿಸಿದೆ.

ಕೇಂದ್ರದ ತಂಡದ ಪರಿಶೀಲನೆ ಆಧಾರವಾಗಿರುವ ಈ ಪತ್ರದಲ್ಲಿ ಕೊರೋನ ತಡೆಯಲು ಸೂಕ್ತವಾದ ನಡವಳಿಕೆ, ಪ್ರಕರಣಗಳ ಪತ್ತೆ ಹಚ್ಚುವಿಕೆ, ಪರೀಕ್ಷೆಯನ್ನು ಉಲ್ಲೇಖಿಸಿದೆ. ಕೇಂದ್ರ ಸರಕಾರದ ತಂಡ ಕಳೆದ ವಾರ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಬಳಿಕ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಪತ್ರ ಬರೆದಿದ್ದಾರೆ.
‘‘ಕೊರೋನ ಸಾಂಕ್ರಾಮಿಕ ರೋಗದ ಎರಡನೆ ಅಲೆಯ ಆರಂಭದಲ್ಲಿ ಮಹಾರಾಷ್ಟ್ರ ಇದೆ. ಪ್ರಕರಣಗಳ ಪತ್ತೆ, ಪರೀಕ್ಷೆ, ಪ್ರತ್ಯೇಕಿಸುವಿಕೆಯಲ್ಲಿ ಸಕ್ರಿಯ ಶ್ರಮ ತುಂಬಾ ಕಡಿಮೆ ಇದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೊರೋನ ನಿಯಂತ್ರಿಸುವ ನಿಟ್ಟಿನಲ್ಲಿ ಜನರ ವರ್ತನೆ ಕಂಡು ಬಂದಿಲ್ಲ’’ ಎಂದು ಭೂಷಣ್ ಪತ್ರದಲ್ಲಿ ಹೇಳಿದ್ದಾರೆ.
ಔರಂಗಾಬಾದ್ನ ಸರಕಾರಿ ವೈದ್ಯಕೀಯ ಕಾಲೇಜು, ನಾಸಿಕ್ನ ವಸಂತ್ ರಾವ್ ಪವಾರ್ ವೈದ್ಯಕೀಯ ಕಾಲೇಜಿನಂತಹ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿಗೆ ಒಳಗಾಗಿ ದಾಖಲಾದವರಲ್ಲಿ ಸಾವಿನ ಸಂಖ್ಯೆ ಅತಿ ಅಧಿಕವಾಗಿದೆ. ಈ ಬಗ್ಗೆ ವಿಸ್ತೃತ ಪರಿಶೀಲನೆ ನಡೆಸಬೇಕಾದ ಅಗತ್ಯತೆ ಇದೆ ಎಂದು ಪತ್ರದಲ್ಲಿ ಭೂಷಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News