ಅತ್ಯಾಚಾರ ಆರೋಪಿ ಪತ್ರಕರ್ತನಿಗೆ ಜಾಮೀನು ನಿರಾಕರಣೆ
ಮುಂಬೈ, ಮಾ.17: ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುಂಬೈ ಮೂಲದ ಪತ್ರಕರ್ತ ವರುಣ್ ಹಿರೇಮಠ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ತಳ್ಳಿಹಾಕಿದೆ ಎಂದು ವರದಿ ತಿಳಿಸಿದೆ.
ಫೆಬ್ರವರಿ 20ರಂದು ದಿಲ್ಲಿಯ ಚಾಣಕ್ಯಪುರಿ ಪ್ರದೇಶದ ಪಂಚತಾರಾ ಹೋಟೆಲ್‌ನಲ್ಲಿ ಹಿರೇಮಠ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 22 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಹಿರೇಮಠ್ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ನಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹಿರೇಮಠ್ ಅರ್ಜಿ ಸಲ್ಲಿಸಿದ್ದ.
ಮಹಿಳೆ ತನ್ನೊಂದಿಗೆ ನಡೆಸಿದ ವಾಟ್ಸಾಪ್ ಮತ್ತು ಇನ್‌ಸ್ಟಗ್ರಾಮ್ ಸಂಭಾಷಣೆಯನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರಲ್ಲಿ ನಡೆಸಿರುವ ಸಂಭಾಷಣೆಯ ಪ್ರಕಾರ ಇಬ್ಬರ ಮಧ್ಯೆ ಸ್ನೇಹ ಸಂಬಂಧವಿತ್ತು . ಅಲ್ಲದೆ ದೈಹಿಕ ಸಂಬಂಧದ ಬಗ್ಗೆ ಮುಚ್ಚುಮರೆಯಿಲ್ಲದೆ ಸಂಭಾಷಣೆ ನಡೆದಿದೆ. ಆದರೆ, ಮೊದಲು ದೈಹಿಕ ಸಂಬಂಧವಿತ್ತು ಎಂಬುದು ಅತ್ಯಾಚಾರ ಆರೋಪದಿಂದ ರಕ್ಷಣೆ ನೀಡಲು ಕಾರಣವಾಗುವುದಿಲ್ಲ ಎಂದು ಹೇಳಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜಯ್ ಖಣಗ್ವಾಲ್, ಜಾಮೀನು ಅರ್ಜಿಯನ್ನು ತಳ್ಳಿಹಾಕಿದ್ದಾರೆ.
ಫೆಬ್ರವರಿ 20ರಂದು ತಾನು ಒಪ್ಪದಿದ್ದರೂ ತನ್ನ ಇಚ್ಚೆಗೆ ವಿರುದ್ಧವಾಗಿ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ, ಮಹಿಳೆ ದೈಹಿಕ ಸಂಬಂಧಕ್ಕೆ ಒಪ್ಪಿರಲಿಲ್ಲ ಎಂದೇ ಭಾವಿಸಲಾಗುತ್ತದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.