×
Ad

ಭಾರತದ ಒಟ್ಟು ಕೊರೋನ ಸೋಂಕಿನ ಪ್ರಕರಣಗಳಲ್ಲಿ ಶೇ. 70 ಐದು ರಾಜ್ಯಗಳಿಂದ ವರದಿ: ಕೇಂದ್ರ ಸರಕಾರ

Update: 2021-03-17 23:11 IST

ಹೊಸದಿಲ್ಲಿ, ಮಾ. 17: ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್ ಹಾಗೂ ತಮಿಳುನಾಡಿನಲ್ಲಿ ಕೊರೋನ ಸೋಂಕಿನ ಪ್ರಕರಣಗಳು ದಿನಂಪ್ರತಿ ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ಮುಂದುವರಿದಿದ್ದು, ಇದು ಒಟ್ಟು 28.903 ಹೊಸ ಸೋಂಕು ಪ್ರಕರಣಗಳಲ್ಲಿ ಶೇ. 71.10ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.

ಹೊಸ ಪ್ರಕರಣಗಳಲ್ಲಿ ಶೇ. 83.91 ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ತಮಿಳುನಾಡು ಹಾಗೂ ಕೇರಳದಿಂದ ವರದಿಯಾಗಿದೆ ಎಂದು ಅದು ತಿಳಿಸಿದೆ.

ಮಹಾರಾಷ್ಟ್ರ ಒಂದರಲ್ಲೇ 17,864 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದಿನಂಪ್ರತಿ ಶೇ. 61.8 ಹೊಸ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದ ನಂತರ ಕೇರಳದಲ್ಲಿ 1,970, ಪಂಜಾಬ್‌ನಲ್ಲಿ 1,463 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಕೇರಳದಲ್ಲಿ ಕಳೆದ ಒಂದು ತಿಂಗಳಿಂದ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಇಳಿಕೆಯಾಗುತ್ತಿರುವುದು ವರದಿಯಾಗಿದೆ.

 ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2.34 ಲಕ್ಷಕ್ಕೆ ಏರಿಕೆಯಾಗಿದೆ. ಇದು ಒಟ್ಟು ಪ್ರಕರಣದ ಶೇ. 2.05. ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಕೇರಳ ಹಾಗೂ ಪಂಜಾಬ್‌ನಲ್ಲಿ ಶೇ. 76.4 ವರದಿಯಾಗಿದೆ. ಮಹಾರಾಷ್ಟ್ರ ಒಂದರಲ್ಲೇ ಶೇ. 60 ವರದಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಬುಧವಾರ ಬೆಳಗ್ಗೆ 7 ಗಂಟೆವರೆಗಿನ ಔಪಚಾರಿಕ ವರದಿಯ ಪ್ರಕಾರ 5,86,855 ಬೈಠಕ್‌ಗಳ ಮೂಲಕ 3.5 ಕೋಟಿಗೂ ಅಧಿಕ ಲಸಿಕೆಯ ಡೋಸ್‌ಗಳನ್ನು ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News