ಇಂಡಿಯಾನಾ ಆಸ್ಪತ್ರೆಯಿಂದ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ

Update: 2021-03-19 11:34 GMT

ಮಂಗಳೂರು, ಮಾ.19: ದೇಶದಲ್ಲಿ ಕೋವಿಡ್ -19ರ ಎರಡನೇ ಅಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಸಮಾಜದ ಎಲ್ಲಾ ಜನರ ಸಹಕಾರ ಅಗತ್ಯ. ನಾವೆಲ್ಲಾ ಕೋವಿಡ್ ನಿಯಂತ್ರಣದ ರಾಯಭಾರಿಗಳಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.

ನಗರದ ಇಂಡಿಯಾನಾ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್ ಸ್ಟಿಟ್ಯೂಟ್ ವತಿಯಿಂದ ಆರಂಭಿಸಲಾದ ಉಚಿತ ಕೋವಿಡ್ -19 ಲಸಿಕೆ ಅಭಿಯಾನಕ್ಕೆ ಆಸ್ಪತ್ರೆಯ ಸಭಾಂಗಣದಲ್ಲಿಂದು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

 ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕೋವಿಡ್ -19 ಲಸಿಕೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಇಂಡಿಯಾನಾ ಆಸ್ಪತ್ರೆ ಉಚಿತವಾಗಿ ಜನರಿಗೆ ಲಸಿಕೆ ನೀಡಲು ಮುಂದೆ ಬಂದಿರುವ ಪ್ರಥಮ ಖಾಸಗಿ ಆಸ್ಪತ್ರೆಯಾಗಿದ್ದು, ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಮುಖ್ಯ ಅತಿಥಿಯಾಗಿದ್ದ ಮಸ್ಜಿದುತ್ತಖ್ವಾದ ಖತೀಬ್ ಹಾಫಿಳ್ ಅಬ್ದುರ್ರಹ್ಮಾನ್ ಮಾತನಾಡಿ, ಲಸಿಕೆ ಪಡೆಯುವ ಮೂಲಕ ಕೋವಿಡ್ ಸೋಂಕು ನಿವಾರಣಾ ಅಭಿಯಾನವನ್ನು ಯಶಸ್ವಿಯಾಗಲು ಸಹಕರಿಸೋಣ ಎಂದರು.

ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ಮಾತನಾಡಿ, ಕೋವಿಡ್ ಮತ್ತೆ ವ್ಯಾಪಿಸಿದರೆ ಸಮಾಜದ ಎಲ್ಲಾ ವರ್ಗದವರು ತೊಂದರೆಗೀಡಾಗುತ್ತಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಎರಡನೇ ಅಲೆಯ ಭೀತಿಯಿದೆ. ಭಾರತ ಸರಕಾರದ ಲಸಿಕೆ ಅಭಿಯಾನಕ್ಕೆ ಇನ್ನಷ್ಟು ಜನರು ಸ್ಪಂದಿಸುವಂತಾಗಲಿ ಎನ್ನುವ ಉದ್ದೇಶದಿಂದ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್  ಇನ್ ಸ್ಟಿಟ್ಯೂಟ್ ಉಚಿತ ಕೋವಿಡ್ -19 ಲಸಿಕೆ ಅಭಿಯಾನವನ್ನು ಇಂದು ಆರಂಭಿಸಿದೆ. ಈ ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನರಿಗೆ ಲಸಿಕೆಯನ್ನು ಸರಕಾರಿ ನಿಯಮಗಳಿಗನುಸಾರವಾಗಿ ಉಚಿತವಾಗಿ ನೀಡಲಾಗುವುದು. ಜಿಲ್ಲೆಯಲ್ಲಿ ವಾಸವಿರುವ 60 ವರ್ಷ ಮೇಲ್ಪಟ್ಟ ಅಥವಾ ಹೃದಯ, ಮೂತ್ರಪಿಂಡ ಮತ್ತು ಇತರ ಸಹಕಾಯಿಲೆಗಳನ್ನು ಹೊಂದಿರುವ 45 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಕೋವಿಡ್-19 ವಿರುದ್ಧದ ಲಸಿಕೆ ಪಡೆಯಬಹುದು. ನಮ್ಮ ಜಿಲ್ಲೆಯ ಜನರು ಕೋವಿಡ್ ವಿರುದ್ಧ ತಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುವುದು, ಕೋವಿಡ್ ಮುಕ್ತ ಜಿಲ್ಲೆ ಮಾಡುವುದು ಈ ಅಭಿಯಾನದ ಉದ್ದೇಶ ಎಂದು ಡಾ, ಯೂಸುಫ್ ಕುಂಬೈ ಹೇಳಿದರು.

  ಲಸಿಕೆಯ ತೊಡಕುಗಳ ಬಗ್ಗೆ ಹೆದರುವಂಥದ್ದೇನೂ ಇಲ್ಲ, ಏಕೆಂದರೆ ಬಹುತೇಕ ಎಲ್ಲ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಸ್ವತಃ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದರು.

ಉಚಿತ ಲಸಿಕೆ ಪಡೆಯ ಬಯಸುವವರು ಮೊ.ಸಂ.: 7259016560ಗೆ ಕರೆ ಮಾಡಬಹುದು. ಕರೆ ಮಾಡಿದ ಬಳಿಕ ಲಸಿಕೆ ನೀಡುವ ದಿನಾಂಕ ಮತ್ತು ಸಮಯದ ಬಗ್ಗೆ ಅವರಿಗೆ ತಿಳಿಸಲಾಗುವುದು, ಸರಕಾರದ ನಿಯಮಗಳ ಪ್ರಕಾರ ಲಸಿಕೆ ಪಡೆಯಲು ಅವರು ತಮ್ಮ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಡೈವಿಂಗ್ ಲೈಸನ್ಸ್ ಅಥವಾ ಪಾಸ್‌ಪೋರ್ಟ್ ಯಾವುದಾದರೂ ಒಂದನ್ನು ತರಬೇಕಾಗಿದೆ ಎಂದು ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.

ಸಮಾರಂಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಐಎಎಸ್ ಅಧಿಕಾರಿ(ತರಬೇತಿ)ಮೋನಾ ರೋತ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೇಶವ ದಾಸ್ ಹಾಗೂ ಆಸ್ಪತ್ರೆ ಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇಂಡಿಯಾನಾ ಆಸ್ಪತ್ರೆಯ ಅಧ್ಯಕ್ಷ ಡಾ.ಅಲಿ ಕುಂಬ್ಳೆ ವಂದಿಸಿದರು.


ನಾನು ಎರಡನೇ ಹಂತದ ಲಸಿಕೆ ತೆಗೆದುಕೊಂಡಿದ್ದೇನೆ: ಜಿಲ್ಲಾಧಿಕಾರಿ

ನಾನು 2 ಬಾರಿ ಅಂದರೆ 2ನೇ ಹಂತದ ಲಸಿಕೆ ಸ್ವೀಕರಿಸಿದ್ದೇನೆ. ನನಗೆ ಯಾವುದೇ ಆರೋಗ್ಯದ ಸಮಸ್ಯೆ ಉಂಟಾಗಿಲ್ಲ. ಎರಡು ಹಂತದ ಲಸಿಕೆ ತೆಗೆದುಕೊಳ್ಳುವ ಮೂಲಕ ಕೋವಿಡ್ ವಿರುದ್ಧದ ರೋಗ ನಿರೋಧಕ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ಎಲ್ಲರು ಕೋವಿಡ್ -19 ನಿಯಂತ್ರಣ ಲಸಿಕೆ ಯನ್ನು ಪಡೆದುಕೊಳ್ಳಬೇಕೆಂದು ಸಾರ್ವಜನಿಕ ರಲ್ಲಿ ಮನವಿ ಮಾಡಿಕೊಳ್ಳುತ್ತೇನೆ'' ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News