ಸ್ಪೀಕರ್ ಅನುಮತಿಯಿಲ್ಲದೆ ದಲಿತನ ಹತ್ಯೆ ಪ್ರಕರಣ ಪ್ರಸ್ತಾಪ : ಜಿಗ್ನೇಶ್ ಮೆವಾನಿ ಅಮಾನತು

Update: 2021-03-19 18:06 GMT

ಅಹ್ಮದಾಬಾದ್,ಮಾ.19: ದಲಿತನ ಹತ್ಯೆಯ ವಿಷಯವನ್ನು ಸ್ಪೀಕರ್ ಅನುಮತಿಯಿಲ್ಲದೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ಅವರನ್ನು ಅಶಿಸ್ತಿನ ವರ್ತನೆಗಾಗಿ ಒಂದು ದಿನದ ಅವಧಿಗೆ ಸದನದ ಕಲಾಪದಿಂದ ಅಮಾನತುಗೊಳಿಸಲಾಗಿದೆ.

  ಗುರುವಾರ ಸದನದಲ್ಲಿ ಪ್ರಶ್ನೋತ್ತರ ವೇಳೆ ಮುಗಿಯುತ್ತಿದ್ದಂತೆಯೇ, ವಡ್‌ಗಾಂ ಕ್ಷೇತ್ರದ ಶಾಸಕರಾದ ಜಿಗ್ನೇಶ್ ಮೆವಾನಿ ಅವರು ಮಾರ್ಚ್ 2ರಂದು ಪೊಲೀಸರ ಉಪಸ್ಥಿತಿಯಲ್ಲೇ ಗುಂಪೊಂದರಿಂದ ಹತ್ಯೆಯಾದ ದಲಿತನ ಚಿತ್ರವಿರುವ ಪೋಸ್ಟರ್ ಅನ್ನು ಪ್ರದರ್ಶಿಸಿದರು. ‘ನೀವು ಯಾಕೆ ಪಾತಕಿಗಳನ್ನು ಬಂಧಿಸುತ್ತಿಲ್ಲ ?’ ಎಂಬ ಬರಹವನ್ನು ಕೂಡಾ ಪೋಸ್ಟರ್‌ನಲ್ಲಿ ಬರೆಯಲಾಗಿತ್ತು.

ಭಾವನಗರ ಜಿಲ್ಲೆಯ ಘೋಗಾ ತಾಲೂಕಿನ ಸನೋದರ್‌ನಲ್ಲಿ 50 ವರ್ಷ ವಯಸ್ಸಿನ ದಲಿತ, ಅಮ್ರಾಭಾಯ್ ಬೊರಿಚಾ ಸ್ಥಳೀಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಉಪಸ್ಥಿತಿಯಲ್ಲೇ ಗುಂಪೊಂದು ಹತ್ಯೆಗೈದ ಘಟನೆಯನ್ನು ಅವರು ಪ್ರಸ್ತಾಪಿಸಿದರು.

ತನ್ನ ಮೈಕ್ ಅನ್ನು ಸ್ತಬ್ಧಗೊಳಿಸಿದಾಗ ಮೆವಾನಿ ಅವರು ಬಿಜೆಪಿ ಸರಕಾರ ಇನ್ನೂ ಕೂಡಾ ಯಾಕೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ಬಂಧಿಸಿಲ್ಲವೆಂದು ಪ್ರಶ್ನಿಸಿದ್ದರು.

‘ಆಗ’ ಮಧ್ಯಪ್ರವೇಶಿಸಿದ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರು ಯಾವುದೇ ವಿಷಯವನ್ನು ಸದನದಲ್ಲಿ ಪ್ರಸ್ತಾವಿಸಬೇಕಾದರೆ ತನ್ನ ಅನುಮತಿ ಅಗತ್ಯವೆಂದು ತಿಳಿಸಿದರು. ಪದೇ ಪದೇ ಮನವಿ ಮಾಡದರೂ ಮೇವಾನಿ ಕುಳಿತುಕೊಳ್ಳದೆ ಇದ್ದಾಗ ತ್ರಿವೇದಿ ಸದನದ ಸಾರ್ಜೆಂಟ್‌ಗಳನ್ನು ಕರೆದು ಶಾಸಕನನ್ನು ಸದನದ ಹೊರಗೆ ಕರೆದೊಯ್ಯುವಂತೆ ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News