ಅಶೋಕ ವಿಶ್ವವಿದ್ಯಾಲಯದ ಸ್ಥಾಪಕರು ಸಂಸ್ಥೆಯ ಆತ್ಮವನ್ನೇ ವಿನಿಮಯ ಮಾಡಿದ್ದಾರೆ: ರಘುರಾಮ್ ರಾಜನ್ ಹೇಳಿಕೆ
ಹೊಸದಿಲ್ಲಿ,ಮಾ.20: ಅಶೋಕ ವಿವಿಯ ಪ್ರಾಧ್ಯಾಪಕ ಹುದ್ದೆಗಳಿಗೆ ರಾಜಕೀಯ ವಿಶ್ಲೇಷಕ ಪಿ.ಬಿ.ಮೆಹ್ತಾ ಮತ್ತು ಆರ್ಥಿಕ ತಜ್ಞ ಅರವಿಂದ ಸುಬ್ರಮಣಿಯನ್ ಅವರ ರಾಜೀನಾಮೆಗಳು ಮತ್ತು ವಿವಿಯ ಸ್ಥಾಪಕರು ಅದರ ಆತ್ಮದೊಂದಿಗೆ ರಾಜಿ ಮಾಡಿಕೊಂಡಿರುವುದು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿವೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು ಹೇಳಿದ್ದಾರೆ.
ವಾಸ್ತವವೆಂದರೆ ಪ್ರೊ.ಮೆಹ್ತಾ ಅವರು ವಿವಿಯ ಆಡಳಿತ ಮಂಡಳಿಗೆ ಮಗ್ಗುಲ ಮುಳ್ಳಾಗಿದ್ದರು. ಅದೂ ಸಾಮಾನ್ಯ ಮುಳ್ಳಲ್ಲ,ಏಕೆಂದರೆ ಅವರು ಸರಕಾರ ಮತ್ತು ಸರ್ವೋಚ್ಚ ನ್ಯಾಯಾಲಯದಂತಹ ಉನ್ನತ ಸಂಸ್ಥೆಗಳಲ್ಲಿರುವವರನ್ನು ಅತ್ಯಂತ ಪರಿಣಾಮಕಾರಿಯಾಗಿ ಟೀಕಿಸುತ್ತಿದ್ದರು ಎಂದು ಲಿಂಕ್ಡ್‌ಇನ್‌ನ ತನ್ನ ಪೋಸ್ಟ್‌ನಲ್ಲಿ ರಾಜನ್ ಬರೆದಿದ್ದಾರೆ.
ವಿವಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಯೂನಿವರ್ಸಿಟಿ ಆಫ್ ಶಿಕಾಗೊ ಬೂಥ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ಪ್ರೊಫೆಸರ್ ಆಗಿರುವ ರಾಜನ್,ಅಭಿವ್ಯಕ್ತಿ ಸ್ವಾತಂತ್ರ್ಯವು ಶ್ರೇಷ್ಠ ವಿವಿಯ ಆತ್ಮವಾಗಿದೆ. ಇದರ ಬಗ್ಗೆ ರಾಜಿ ಮಾಡಿಕೊಳ್ಳುವ ಮೂಲಕ ವಿವಿಯ ಸ್ಥಾಪಕರು ಅದನ್ನು ವಿನಿಮಯಿಸಿದ್ದಾರೆ ಎಂದಿದ್ದಾರೆ. ನಿಮ್ಮ ಆತ್ಮದೊಂದಿಗೆ ರಾಜಿ ಮಾಡಿಕೊಳ್ಳಲು ನೀವು ಸಮ್ಮತಿಸಿದರೂ ಒತ್ತಡವು ಕಡಿಮೆಯಾಗುವ ಏನಾದರೂ ಸಾಧ್ಯತೆಯಿದೆಯೇ? ಇದು ನಿಜಕ್ಕೂ ಭಾರತದ ಪಾಲಿಗೆ ದುಃಖಕರ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಸುಬ್ರಮಣಿಯನ್ ಅವರ ರಾಜೀನಾಮೆ ಪತ್ರದಲ್ಲಿಯ ಕೆಲವು ಸಾಲುಗಳನ್ನು ಉಲ್ಲೇಖಿಸಿರುವ ರಾಜನ್,ಖಾಸಗಿ ಸ್ಥಾನಮಾನ ಮತ್ತು ಖಾಸಗಿ ಬಂಡವಾಳದ ಬೆಂಬಲವನ್ನು ಹೊಂದಿರುವ ಅಶೋಕ ವಿವಿಗೂ ಶೈಕ್ಷಣಿಕ ಅಭಿವ್ಯಕ್ತಿ ಮತ್ತು ಸ್ವಾತಂತ್ರ್ಯಕ್ಕೆ ಅವಕಾಶ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.
ಅಪಾಯಕಾರಿ ದಾಳಿ:ಜಾಗತಿಕ ಶಿಕ್ಷಣ ತಜ್ಞರು
ಪಿ.ಬಿ.ಮೆಹ್ತಾ ಅವರೊಂದಿಗೆ ಏಕತೆಯನ್ನು ವ್ಯಕ್ತಪಡಿಸಿ ವಿಶ್ವದ ಅತ್ಯುತ್ತಮ ವಿವಿಗಳ ಸುಮಾರು 150 ಖ್ಯಾತ ಬುದ್ಧಿಜೀವಿಗಳು ಅಶೋಕ ವಿವಿಯ ಟ್ರಸ್ಟಿಗಳು,ಆಡಳಿತಗಾರರು ಮತ್ತು ಬೋಧಕ ವೃಂದಕ್ಕೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ‘ಶೈಕ್ಷಣಿಕ ಸ್ವಾತಂತ್ರ್ಯದ ಮೇಲೆ ಅಪಾಯಕಾರಿ ದಾಳಿ ’ಎಂಬ ಶೀರ್ಷಿಕೆಯ ಪತ್ರಕ್ಕೆ ಸಹಿ ಹಾಕಿದವರಲ್ಲಿ ಹಾರ್ವರ್ಡ್ ವಿವಿಯ ಹೋಮಿ ಕೆ.ಭಾಭಾ,ಬರ್ಕಲಿ ಸ್ಕೂಲ್ ಆಫ್ ಲಾದ ಇರ್ವಿನ್ ಚೆಮರಿಂಸ್ಕಿ,ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ರೋಜರ್ಸ್ ಸ್ಮಿಥ್,ಕಾರ್ನೆಜಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್‌ನ ಮಿಲನ್ ವೈಷ್ಣವ ಮತ್ತು ಆಕ್ಸ್‌ಫರ್ಡ್ ವಿವಿಯ ಕೇಟ್ ಒ’ರೇಗನ್ ಅವರು ಸೇರಿದ್ದಾರೆ.
ಹಾಲಿ ಭಾರತ ಸರಕಾರದ ಕಟು ಟೀಕಾಕಾರ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದ ಮೆಹ್ತಾ ತನ್ನ ಬರವಣಿಗೆಗಳಿಂದಾಗಿ ಅಧಿಕಾರದಲ್ಲಿರುವವರ ಕೆಂಗಣ್ಣಿಗೆ ಗುರಿಯಾಗಿದ್ದರು. ತಮ್ಮ ಸಾಂಸ್ಥಿಕ ಕರ್ತವ್ಯವಾಗಿ ಮೆಹ್ತಾರನ್ನು ಸಮರ್ಥಿಸಿಕೊಳ್ಳಬೇಕಿದ್ದ ಅಶೋಕ ವಿವಿಯ ಟ್ರಸ್ಟಿಗಳು ಅದರ ಬದಲು ಅವರ ರಾಜೀನಾಮೆಗೆ ಒತ್ತಡ ಹೇರಿದ್ದಾರೆ. ವಿವಿಯು ನಿರ್ಭೀತ ವಿಚಾರಣೆ ಮತ್ತು ಟೀಕೆಗಳಿಗೆ ತವರುಮನೆಯಾಗಬೇಕು ಎಂದು ಈ ಬುದ್ಧಿಜೀವಿಗಳು ಪತ್ರದಲ್ಲಿ ಹೇಳಿದ್ದಾರೆ.