ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆಗೆ ಕೇಂದ್ರ ಸರಕಾರ ಪತ್ರ
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನಿವೃತ್ತಿಯಾಗಲು ಇನ್ನು ಒಂದು ತಿಂಗಳು ಬಾಕಿ ಇರುವಾಗ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಆರಂಭಿಸಿದೆ. ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಸಿಜೆಐ ಬೋಬ್ಡೆಗೆ ಸರಕಾರವು ಪತ್ರದ ಮೂಲಕ ತಿಳಿಸಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಎಪ್ರಿಲ್ 23ರಂದು ನಿವೃತ್ತಿಯಾಗಲಿರುವ ಜಸ್ಟಿಸ್ ಬೋಬ್ಡೆಗೆ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಶುಕ್ರವಾರ ಪತ್ರವನ್ನು ಕಳುಹಿಸಿದ್ದು, ಬೋಬ್ಡೆ ಅವರಿಂದ ಶಿಫಾರಸನ್ನು ಕೋರಿದ್ದಾರೆ ಎಂದು ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
ದೇಶದ ಮುಖ್ಯ ನ್ಯಾಯಾಧೀಶರಾಗಿ ನೇಮಕವಾಗುವವರು ಸುಪ್ರೀಂಕೋರ್ಟ್ ನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರಬೇಕಾಗುತ್ತದೆ. ಸಿಜೆಐ ಎಸ್.ಎ. ಬೋಬ್ಡೆ ಬಳಿಕ ಜಸ್ಟಿಸ್ ಎನ್..ವಿ. ರಮಣ ಸುಪ್ರೀಂಕೋರ್ಟ್ ನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ.
1957ರ ಆಗಸ್ಟ್ 27ರಂದು ಜನಿಸಿರುವ ಜಸ್ಟಿಸ್ ರಮಣ ಅವರ ಸೇವಾವಧಿಯು 2022ರ ಆಗಸ್ಟ್ 26ರ ತನಕ ಇದೆ.