×
Ad

8ನೇ ತರಗತಿಯಲ್ಲಿ ಶಾಲೆ ತೊರೆದಿದ್ದ ವ್ಯಕ್ತಿಯಿಂದ 'ಶೇವಿಂಗ್‌ ಬ್ಲೇಡ್'‌ ಬಳಸಿ ಆಪರೇಷನ್:‌ ತಾಯಿ, ಮಗು ಮೃತ್ಯು!

Update: 2021-03-20 18:26 IST

ಲಕ್ನೊ: ಸ್ಥಳೀಯ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ 8ನೇ ತರಗತಿಯಲ್ಲ್ಲಿ ಡ್ರಾಪ್ ಔಟ್ ಆಗಿದ್ದ ವ್ಯಕ್ತಿಯೊಬ್ಬ ಹೆರಿಗೆಗೆ ಬಂದಿದ್ದ ಮಹಿಳೆಗೆ ಶೇವಿಂಗ್ ಬ್ಲೇಡ್‍ನಿಂದ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆ ನಡೆಸಿದ್ದ ಪರಿಣಾಮ ತಾಯಿ ಹಾಗೂ ಮಗು ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಸುಲ್ತಾನ್ ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. 

30 ವರ್ಷದ ರಾಜೇಂದ್ರ ಶುಕ್ಲಾ ಶೇವಿಂಗ್ ಬ್ಲೇಡ್ ಬಳಸಿ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಮಹಿಳೆ ಸಾವನ್ನಪ್ಪಿದ್ದರು. ಮಗು ಜನಿಸಿದ ಕೆಲವೇ ನಿಮಿಷದಲ್ಲಿ ನಿಧನವಾಗಿದೆ.

8ನೇ ತರಗತಿಯಲ್ಲಿ ಡ್ರಾಪ್ ಔಟ್ ಆಗಿರುವ ರಾಜೇಂದ್ರ ಶುಕ್ಲಾನನ್ನು ಸೈನಿ ಗ್ರಾಮದ ಮಾ ಶಾರದಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ರಾಜೇಶ್ ಸಾಹ್ಲಿ ಎಂಬಾತ  ನೇಮಿಸಿಕೊಂಡಿದ್ದ. ರಾಜೇಶ್ ನಡೆಸುತ್ತಿದ್ದ ಆಸ್ಪತ್ರೆಯನ್ನು ನೋಂದಾಯಿಸದೇ ಇರುವುದು ತನಿಖೆಯಿಂದ ತಿಳಿದಬಂದಿದೆ.  ಏತನ್ಮಧ್ಯೆ ಅಕ್ರಮ ಚಿಕಿತ್ಸಾಲಯಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸರು ಮುಖ್ಯ ವೈದ್ಯಕೀಯ ಅಧಿಕಾರಿಗೆ ಪತ್ರ ಬರೆದಿದ್ದಾರೆ.

ಮಹಿಳೆಯ ಪತಿ ನೀಡಿರುವ ದೂರಿನ ಮೇರೆಗೆ ರಾಜೇಂದ್ರ ಶುಕ್ಲಾ ಹಾಗೂ ರಾಜೇಶ್ ಸಾಹ್ಲಿ ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ತನ್ನ ಪತ್ನಿ ಹಾಗೂ ನವಜಾತ ಮಗು ಮೃತಪಟ್ಟಿದ್ದಾರೆ ಎಂದು ಮಹಿಳೆಯ ಪತಿ ರಾಜಾರಾಮ್ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ ಎಂದು ಸುಲ್ತಾನ್ ಪುರ ಎಸ್ಪಿ ಅರವಿಂದ ಚತುರ್ವೇದಿ ತಿಳಿಸಿದ್ದಾರೆ. ಇದು ಶಸ್ತ್ರಚಿಕಿತ್ಸೆ ನಡೆಸಲು ಯಾವುದೇ ಮೂಲ ಸೌಕರ್ಯಗಳಿಲ್ಲದ, ನೋಂದಾಯಿಸದ ಕ್ಲಿನಿಕ್ ಎಂದು ನಮಗೆ ತಿಳಿದುಬಂದಿದೆ. ಆಪರೇಶನ್ ನಡೆಸಲು ರೇಝರ್ ಬ್ಲೇಡ್ ಗಳನ್ನು ಬಳಸಲಾಗಿದೆ ಎಂದು ಅರವಿಂದ ಚತುರ್ವೇದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News