×
Ad

ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ನೇಪಾಳ ಅನುಮೋದನೆ

Update: 2021-03-20 20:38 IST

ಕಠ್ಮಂಡು (ನೇಪಾಳ), ಮಾ. 20: ಭಾರತದ ಭಾರತ್ ಬಯೋಟೆಕ್ ಔಷಧ ತಯಾರಿಕಾ ಕಂಪೆನಿಯ ಕೊರೋನ ವೈರಸ್ ಲಸಿಕೆ ಕೋವ್ಯಾಕ್ಸಿನ್‌ನ ತುರ್ತು ಬಳಕೆಗೆ ನೇಪಾಳದ ಔಷಧ ನಿಯಂತ್ರಣ ಪ್ರಾಧಿಕಾರ ಶನಿವಾರ ಅನುಮೋದನೆ ನೀಡಿದೆ.

ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಕೋವಿಡ್-19 ಲಸಿಕೆಗೆ ಅನುಮೋದನೆ ನೀಡಿರುವ ಮೂರನೇ ದೇಶ ನೇಪಾಳ ಆಗಿದೆ. ಇದಕ್ಕೂ ಮೊದಲು ಈ ಲಸಿಕೆಗೆ ಭಾರತ ಮತ್ತು ಝಿಂಬಾಬ್ವೆ ಅನುಮೋದನೆ ನೀಡಿವೆ.

ಕೋವ್ಯಾಕ್ಸಿನ್‌ನ ತುರ್ತು ಬಳಕೆಗೆ ಶರತ್ತುಬದ್ಧ ಅನುಮತಿ ನೀಡಲು ನೇಪಾಳದ ಔಷಧ ನಿಯಂತ್ರಣ ಇಲಾಖೆಯ ಔಷಧ ಸಲಹಾ ಸಮಿತಿಯ ಸಭೆಯು ನಿರ್ಧರಿಸಿತು ಎಂದು ‘ದ ಕಠ್ಮಂಡು ಪೋಸ್ಟ್’ ವರದಿ ಮಾಡಿದೆ. ಇದರೊಂದಿಗೆ ನೇಪಾಳದಲ್ಲಿ ಈವರೆಗೆ ಮೂರು ಲಸಿಕೆಗಳಿಗೆ ಅನುಮೋದೆನೆ ಲಭಿಸಿದಂತಾಗಿದೆ.

ನೇಪಾಳದಲ್ಲಿ ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕೋರಿ ಭಾರತ್ ಬಯೋಟೆಕ್ ಜನವರಿ 13ರಂದು ಅರ್ಜಿ ಸಲ್ಲಿಸಿತ್ತು. ಜನವರಿ 13ರಂದೇ ಮೂರು ಕೊರೋನ ವೈರಸ್ ಲಸಿಕೆ ತಯಾರಿಕಾ ಕಂಪೆನಿಗಳು ತಮ್ಮ ಲಸಿಕೆಗಳಿಗೆ ಅನುಮೋದನೆ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದವು. ಈ ಪೈಕಿ ಆಕ್ಸ್‌ಫರ್ಡ್-ಆ್ಯಸ್ಟ್ರಝೆನೆಕ ಲಸಿಕೆಗೆ ನೇಪಾಳವು ಜನವರಿ 15ರಂದೇ ತುರ್ತು ಅನುಮೋದನೆ ನೀಡಿತ್ತು.

ಬಳಿಕ, ಫೆಬ್ರವರಿ 17ರಂದು ನೇಪಾಳವು ಚೀನಾದ ಸಿನೊಫಾರ್ಮ್ ಅಭಿವೃದ್ಧಿಪಡಿಸಿದ ಕೊರೋನ ವೈರಸ್ ಲಸಿಕೆ ಬಿಬಿಐಬಿಪಿ-ಕೋರ್‌ವಿ ಲಸಿಕೆಗೆ ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News