ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ ಮಾಜಿ ಪೊಲೀಸ್ ಆಯುಕ್ತ
ಮುಂಬೈ, ಮಾ.20: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಪೊಲೀಸರ ಕಾರ್ಯದಲ್ಲಿ ಹಸ್ತಕ್ಷೇಪ ನಡೆಸುವುದಲ್ಲದೆ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ವಜಾಗೊಂಡಿರುವ ಅಧಿಕಾರಿ ಪರಮ್‌ಬೀರ್ ಸಿಂಗ್ ಆರೋಪಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದಿರುವ ‘ಮಹಾರಾಷ್ಟ್ರದ ಗೌರವಾನ್ವಿತ ಗೃಹ ಸಚಿವರ ಅಸತ್ಯದ ಹೇಳಿಕೆಗಳು’ ಎಂಬ ಶೀರ್ಷಿಕೆಯ ಪತ್ರದಲ್ಲಿ ಅನಿಲ್ ದೇಶ್‌ಮುಖ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ‘ತನಗೆ ನಿಷ್ಟವಾಗಿರುವ ಸಚಿನ್ ವಾಝೆ ಸಹಿತ ಹಲವು ಅಧಿಕಾರಿಗಳನ್ನು, ಸುಲಿಗೆ ಕೃತ್ಯಕ್ಕೆ ನೇಮಿಸಿದ್ದಾರೆ. ರೆಸ್ಟೋರೆಂಟ್, ಪಬ್, ಬಾರ್, ಹುಕ್ಕಾ ಪಾರ್ಲರ್‌ಗಳಿಂದ ಪ್ರತೀ ತಿಂಗಳು 100 ಕೋಟಿ ರೂ. ಮೊತ್ತವನ್ನು ಸಂಗ್ರಹಿಸುವ ಕೆಲಸವನ್ನು ಇವರಿಗೆ ವಹಿಸಲಾಗಿದೆ’ ಎಂದು ಆರೋಪಿಸಲಾಗಿದೆ.
ಗೃಹ ಸಚಿವರು ಪೊಲೀಸರ ಕೆಲಸದಲ್ಲಿ ಮಧ್ಯಪ್ರವೇಶಿಸಿ ಪ್ರಕರಣಗಳನ್ನು ಹೇಗೆ ನಿರ್ವಹಿಸುವುದು, ಆರೋಪಪಟ್ಟಿ ದಾಖಲಿಸುವುದು ಮುಂತಾದ ಬಗ್ಗೆ ಸಲಹೆ ನೀಡುತ್ತಿದ್ದಾರೆ. ದಾದ್ರ ಮತ್ತು ನಾಗರ್‌ಹವೇಲಿಯ ಸಂಸದ ಮೋಹನ್‌ಭಾಯ್ ದೇಳ್ಕರ್ ಮುಂಬೈಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ದಾದ್ರ ಮತ್ತು ನಾಗರ್‌ಹವೇಲಿಯ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸುವಂತೆ ಸಚಿವರು ಹೇಳಿದ್ದರು. ಆದರೆ ತಾನು ನಿರಾಕರಿಸಿದ್ದೆ. ಈ ಹಿನ್ನೆಲೆಯಲ್ಲಿ, ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ತನ್ನನ್ನು ಹರಕೆಯ ಕುರಿಯನ್ನಾಗಿಸಿದ್ದಾರೆ ಎಂದು ಪರಮ್‌ಬೀರ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಚಿವ ದೇಶ್‌ಮುಖ್ ಆರೋಪವನ್ನು ನಿರಾಕರಿಸಿದ್ದಾರೆ. ಈ ಮಧ್ಯೆ, ಗಂಭೀರ ಆರೋಪ ಎದುರಿಸುತ್ತಿರುವ ಅನಿಲ್ ದೇಶ್‌ಮುಖ್ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.