ನಿರಾಶ್ರಿತರ ಸಮಸ್ಯೆ: ಮಿಝೋರಾಂ ಸಿಎಂ- ಮ್ಯಾನ್ಮಾರ್ ಸಚಿವ ವರ್ಚುವಲ್ ಭೇಟಿ
ಐಜ್ವಾಲ್, ಮಾ.22: ಮ್ಯಾನ್ಮಾರ್ ನಿರಾಶ್ರಿತರ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಮಿಝೋರಾಂ ರಾಜ್ಯ ಸರ್ಕಾರ ನಡುವೆ ಮುಸುಕಿನ ಗುದ್ದಾಟ ನಡೆದಿರುವ ಮಧ್ಯೆಯೇ, ಮಿಝೋರಾಂ ಮುಖ್ಯಮಂತ್ರಿ ಝೊರಮ್‌ತಂಗಾ ಅವರು ಮ್ಯಾನ್ಮಾರ್‌ನ ವಿದೇಶಾಂಗ ಸಚಿವ ಝಿನ್ ಮಾರ್ ಆಂಗ್ ಜತೆ ವರ್ಚುವಲ್ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಸಭೆ ಶಿಷ್ಟಾಚಾರಕ್ಕೆ ವಿರುದ್ಧವಾಗಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇದಕ್ಕೆ ಅನುಮೋದನೆ ನೀಡಿಲ್ಲ ಎಂದು ಉನ್ನತ ಮೂಲಗಳು ಹೇಳಿವೆ. ಈ ಬಗ್ಗೆ ಮುಖ್ಯಮಂತ್ರಿಗೂ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
"ಅವರು ಅದನ್ನು ಮಾಡಬಾರದಿತ್ತು; ಆದರೆ ಬಹುಶಃ ಅವರಿಗೆ ಶಿಷ್ಟಾಚಾರದ ಅರಿವು ಇದ್ದಿರಲಿಲ್ಲ. ಈ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ" ಎಂದು ಮೂಲಗಳು ಹೇಳಿವೆ.
ಮ್ಯಾನ್ಮಾರ್ ಕ್ಷಿಪ್ರಕ್ರಾಂತಿ ಬಳಿಕ ಝಿನ್ ವಿದೇಶಾಂಗ ಸಚಿವರಾಗಿ ಉಳಿದಿಲ್ಲ. ಹಾಲಿ ಮ್ಯಾನ್ಮಾರ್ ಮಿಲಿಟರಿ ರಾಜ್ಯ ಆಡಳಿತ ಮಂಡಳಿ ವುನ್ನಾ ಮೌಂಗ್ ಲ್ವಿನ್ ಅವರನ್ನು ವಿದೇಶಾಂಗ ಸಚಿವರಾಗಿ ನೇಮಿಸಿದೆ.
"ರವಿವಾರ ಮುಂಜಾನೆ ಆನ್‌ಲೈನ್ ಮೂಲಕ ಮ್ಯಾನ್ಮಾರ್‌ನ ಗೌರವಾನ್ವಿತ ವಿದೇಶಾಂಗ ಸಚಿವ ಝಿನ್ ಮಾರ್ ಆಂಗ್ ಅವರನ್ನು ಭೇಟಿ ಮಾಡಿದ್ದೆ. ಈ ಕಷ್ಟದ ಸಂದರ್ಭದಲ್ಲಿ ನಾವು ಮ್ಯಾನ್ಮಾರ್ ಜತೆಗೆ ಇದ್ದೇವೆ" ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಇದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮ್ಯಾನ್ಮಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಟ್ಯಾಗ್ ಮಾಡಿದ್ದಾರೆ. ಮ್ಯಾನ್ಮಾರ್ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿ, ಮಿಝೋರಾಂ ಜನತೆಯೊಂದಿಗೆ ಜನಾಂಗೀಯ ಸಂಬಂಧ ಹೊಂದಿರುವ ಮ್ಯಾನ್ಮಾರ್ ನಿರಾಶ್ರಿತರಿಗೆ ಆಶ್ರಯ ನೀಡುವಂತೆ ಮುಖ್ಯಮಂತ್ರಿ ಈ ಹಿಂದೆ ಮನವಿ ಮಾಡಿದ್ದರು.