ಇಲೆಕ್ಟೋರಲ್ ಬಾಂಡ್ ಮಾರಾಟ: ಕೇಂದ್ರದಿಂದ ಎಸ್‍ಬಿಐಗೆ ರೂ. 4.1 ಕೋಟಿ ಕಮಿಷನ್ ಪಾವತಿ

Update: 2021-03-22 07:29 GMT

ಹೊಸದಿಲ್ಲಿ: ಇಲೆಕ್ಟೋರಲ್ ಬಾಂಡ್‍ಗಳ ಮಾರಾಟಕ್ಕಾಗಿ ಕಮಿಷನ್ ರೂಪದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಕೇಂದ್ರ ಸರಕಾರ ರೂ 4.1 ಕೋಟಿ ಪಾವತಿಸಿದೆ ಎಂದು ಆರ್‍ಟಿಐ ಮೂಲಕ ದೊರೆತ ಮಾಹಿತಿಯಿಂದ ತಿಳಿದು ಬಂದಿದೆ. ಈ ಬಾಂಡ್‍ಗಳ ಮುದ್ರಣಕ್ಕಾಗಿ ಸರಕಾರ ಹೆಚ್ಚುವರಿ ರೂ 1.86 ಕೋಟಿ ವ್ಯಯಿಸಿದೆ ಎಂದೂ ತಿಳಿದು ಬಂದಿದೆ.

ಲೋಕೇಶ್ ಗುಪ್ತಾ ಎಂಬವರು ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಎಸ್‍ಬಿಐ ನೀಡಿದ ಉತ್ತರದಲ್ಲಿ ಮೇಲಿನ ಮಾಹಿತಿಯಿದೆ.

ಇಲೆಕ್ಟೋರಲ್ ಬಾಂಡ್‍ಗಳನ್ನು 15 ಹಂತಗಳಲ್ಲಿ ಮಾರಾಟ ಮಾಡಿದ್ದಕ್ಕಾಗಿ ಕೇಂದ್ರ ಸರಕಾರ ಎಸ್‍ಬಿಐಗೆ ಒಟ್ಟು ರೂ 4.35 ಕೋಟಿ ಕಮಿಷನ್ ನೀಡಬೇಕಿದ್ದು ಇದರ ಪೈಕಿ 13 ಹಂತಗಳ ಕಮಿಷನ್ ಮೊತ್ತವಾದ ರೂ 4.1 ಕೋಟಿ ಸರಕಾರ ಪಾವತಿಸಿದೆ ಹಾಗೂ ರೂ 25 ಲಕ್ಷ ಬಾಕಿಯಿದೆ ಎಂದು ತಿಳಿದು ಬಂದಿದೆ.

ಇಲ್ಲಿಯ ತನಕ ಒಟ್ಟು 6,64,250 ಇಲೆಕ್ಟೋರಲ್ ಬಾಂಡ್‍ಗಳನ್ನು ಮುದ್ರಿಸಲಾಗಿದೆ ಹಾಗೂ ಈ ಬಾಂಡ್‍ಗಳ ಮೂಲಕ ದೊರೆತ ಒಟ್ಟ ದೇಣಿಗೆ ರೂ 6,535 ಕೋಟಿ ತಲುಪಿದೆ.

ಇಲೆಕ್ಟೋರಲ್ ಬಾಂಡ್‍ಗಳ ಮಾರಾಟವನ್ನು ನಿಲ್ಲಿಸಲು ಸೂಚನೆ ನೀಡಬೇಕೆಂದು ಕೋರಿ ಎನ್‍ಜಿಒ - ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಲ್ಲಿಸಿರುವ ಅಪೀಲನ್ನು  ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿದ ಕೆಲವೇ ದಿನಗಳಲ್ಲಿ ಮೇಲಿನ ಮಾಹಿತಿ ದೊರಕಿದೆ.

ವಿಧಾನಸಭಾ ಚುನಾವಣೆಗಳಿಗೆ ಮುನ್ನ ಇಲೆಕ್ಟೋರಲ್ ಬಾಂಡ್‍ಗಳನ್ನು ಮಾರಾಟ ಮಾಡಿದಲ್ಲಿ  ಶೆಲ್ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ಅಕ್ರಮವಾಗಿ ಹಣ ನೀಡುವ ಸಾಧ್ಯತೆಯಿದೆ ಎಂದು ಹೇಳಿ ಎಡಿಆರ್ ತನ್ನ ಅಪೀಲಿನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News