ಯುವತಿಯ ಬೆನ್ನ ಹಿಂದೆ ಬಿದ್ದು ಕಿರುಕುಳ ನೀಡಿದ ಎಸ್‍ಐಗೆ ಕ್ಲೀನ್ ಚಿಟ್ ನೀಡಿದ ಬಳಿಕ ಬಂಧನ

Update: 2021-03-22 17:47 GMT

 ಲಕ್ನೋ,ಮಾ.22: ಮಹಿಳೆಗೆ ಕಿರುಕುಳ ನೀಡಿದ್ದ,ಆಕೆಯ ಕುಟುಂಬದ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದ ಮತ್ತು ಇಡೀ ಕುಟುಂಬವನ್ನು ಹೆಚ್ಚುಕಡಿಮೆ ಆತ್ಮಹತ್ಯೆಯ ಅಂಚಿಗೆ ತಳ್ಳಿದ್ದ ಆರೋಪಗಳಿಂದ ನಾಲ್ಕು ದಿನಗಳ ಹಿಂದಷ್ಟೇ ‘ಕ್ಲೀನ್ ಚಿಟ್’ ಪಡೆದಿದ್ದ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಪೊಲೀಸ್ ಅಧಿಕಾರಿಯನ್ನು ಸ್ಥಳೀಯ ಪೊಲೀಸರು ಮತ್ತೆ ಬಂಧಿಸಿದ್ದು,ಆತನ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವುದಾಗಿ ತಿಳಿಸಿದ್ದಾರೆ.

 ಈವರೆಗೆ ಲಭ್ಯ ಸಾಕ್ಷಾಧಾರಗಳು ಮತ್ತು ವಿಷಯವನ್ನು ಪರಿಶೀಲಿಸಲು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯ ಪ್ರಾಥಮಿಕ ವರದಿಯ ಆಧಾರದಲ್ಲಿ ಎಸ್‌ಐ ದೀಪಕ್ ಸಿಂಗ್‌ನನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ ಎಂದು ಬಸ್ತಿ ಜಿಲ್ಲೆಯ ನೂತನ ಎಸ್‌ಪಿ ಆಶಿಷ ಶ್ರೀವಾತ್ಸವ ಅವರು ಟ್ವಿಟರ್‌ನಲ್ಲಿ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಸ್ತಿ ಜಿಲ್ಲೆಯ ಎಸ್‌ಪಿ ಆಗಿದ್ದು,ವರ್ಗಾವಣೆಗೊಂಡಿರುವ ಹೇಮರಾಜ ಮೀನಾ ಅವರು ದೀಪಕ ಸಿಂಗ್‌ನನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದ್ದರು. ಮಹಿಳೆ ಮತ್ತು ಆಕೆಯ ಕುಟುಂಬದ ದೂರುಗಳಲ್ಲಿ ಸತ್ಯವಿಲ್ಲ ಎಂದು ಅವರು ಟ್ವೀಟಿಸಿದ್ದರು.

ಕಳೆದ ವರ್ಷದ ಜೂನ್‌ನಲ್ಲಿ ಕೊರೋನವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಮಾಸ್ಕ್ ಬಳಕೆಯ ತಪಾಸಣೆ ವೇಳೆ ಸಿಂಗ್ ತನ್ನ ಫೋನ್ ನಂಬರ್ ಪಡೆದುಕೊಂಡಿದ್ದು,ಆಗಿನಿಂದ ತನಗೆ ಅನುಚಿತ ಸಂದೇಶಗಳನ್ನು ಕಳುಹಿಸುತ್ತಿದ್ದ ಮತ್ತು ಭೇಟಿಗೆ ಒತ್ತಾಯಿಸುತ್ತಿದ್ದ. ತಾನು ಅದಕ್ಕೆ ಪ್ರತಿಕ್ರಿಯಿಸಿರಲಿಲ್ಲ ಮತ್ತು ನಂತರ ಆತನ ನಂಬರ್‌ನ್ನು ಬ್ಲಾಕ್ ಮಾಡಿದ್ದೆ, ಇದಾದ ಬಳಿಕ ತನ್ನ ಮತ್ತು ತನ್ನ ಕುಟುಂಬದ ವಿರುದ್ಧ ಕನಿಷ್ಠ ಎಂಟು ಸುಳ್ಳು ಪ್ರಕರಣಗಳು ದಾಖಲಾಗಿವೆ. ಸಿಂಗ್‌ನ ಈ ಕೃತ್ಯಗಳಿಂದ ಹತಾಶರಾಗಿ ತಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆವು, ತಮಗೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಮಹಿಳೆ ಮೀನಾ ಅವರಿಗೆ ಸಲ್ಲಿಸಿದ್ದ ದೂರಿನಲ್ಲಿ ಆರೋಪಿಸಿದ್ದಳು. ಆದರೆ ‘ವಿಚಾರಣೆ’ಯ ಬಳಿಕ ಮೀನಾ ಮಹಿಳೆಯ ದೂರನ್ನು ತಳ್ಳಿ ಹಾಕಿದ್ದರು.

ಕಳೆದ ವರ್ಷದ ಜೂನ್‌ನಲ್ಲಿ ಕಂದಾಯ ಇಲಾಖೆಯ ತಂಡವೊಂದು ರಸ್ತೆಯನ್ನು ಅಳೆಯಲು ಗ್ರಾಮಕ್ಕೆ ತೆರಳಿತ್ತು. ಕೆಲವು ಗ್ರಾಮಸ್ಥರು ಗಲಾಟೆಗೆ ಯತ್ನಿಸಿದ್ದು,ಸಿಂಗ್ ಪ್ರತಿಕ್ರಮಗಳನ್ನು ಕೈಗೊಂಡಿದ್ದರು. ಗ್ರಾಮಸ್ಥರು ಸರಕಾರಿ ಅಧಿಕಾರಿಗಳನ್ನು ಒತ್ತೆಸೆರೆಯಲ್ಲಿಟ್ಟುಕೊಂಡಿದ್ದರು ಮತ್ತು ನಂತರ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ತೆರಳಿದ್ದರು. ಘಟನೆಯ ಬಗ್ಗೆ ಮಹಿಳೆ,ಆಕೆಯ ಸೋದರ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಕೆಯ ಸೋದರನ ವಿರುದ್ಧ ಎರಡು ಭೂವಿವಾದದ ಪ್ರಕರಣಗಳೂ ಇವೆ ಎಂದು ಮೀನಾ ಮಾ.18ರಂದು ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News