×
Ad

ಧರ್ಮಾಧಾರಿತ ಸಿಎಎ ಅಸಾಂವಿಧಾನಿಕ: ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ವಿ. ಗೋಪಾಲ ಗೌಡ

Update: 2021-03-22 22:56 IST
ಫೋಟೊ ಕೃಪೆ: //twitter.com/bolisetti_satya/

ಹೊಸದಿಲ್ಲಿ, ಮಾ. 22: ‘‘ಧರ್ಮದ ಆಧಾರದಲ್ಲಿ ಸಂಸತ್‌ನಲ್ಲಾಗಲಿ, ರಾಜ್ಯ ವಿಧಾನ ಸಭೆಗಳಲ್ಲಾಗಲಿ ಯಾವುದೇ ಕಾನೂನನ್ನು ಅಂಗೀಕರಿಸುವಂತಿಲ್ಲ ಎಂದು 1994ರಲ್ಲಿ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಹೇಳಿದೆ. ಹಾಗಾಗಿ, ಈ ತೀರ್ಪಿನ ಪ್ರಕಾರ, ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸುವ ಸಿಎಎ ಅಸಾಂವಿಧಾನಿಕ’’ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ವಿ. ಗೋಪಾಲ ಗೌಡ ಹೇಳಿದದಾರೆ ಎಂದು ‘ಲೈವ್‌ಲಾ’ ವರದಿ ಮಾಡಿದೆ.

ಹಿರಿಯ ವಕೀಲ ಕೆ.ಎಸ್. ಚೌಹಾನ್ ಬರೆದ ಪುಸ್ತಕ ‘ಸಿಟಿಝನ್‌ಶಿಪ್, ರೈಟ್ಸ್ ಆ್ಯಂಡ್ ಕಾನ್‌ಸ್ಟಿಟ್ಯೂಶನಲ್ ಲಿಮಿಟೇಶನ್ಸ್’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘‘ಈಗ ಭಾರತೀಯ ನಾಗರಿಕರು ದೊಡ್ಡ ಬಿಕ್ಕಟ್ಟೊಂದನ್ನು ಎದುರಿಸುತ್ತಿದ್ದಾರೆ ಹಾಗೂ ಕಾನೂನು ಅಪಾಯದಲ್ಲಿದೆ. ಪೌರತ್ವ ಕಾಯ್ದೆಯ ಸಮಸ್ಯೆಗಳು ಅಗಾಧವಾಗಿವೆ’’ ಎಂದು ನ್ಯಾಯಮೂರ್ತಿ ಗೌಡ ಹೇಳಿದರು.

ಅಸ್ಸಾಮ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದರು. ‘‘ಭಾರತೀಯ ಪ್ರಜೆಗಳಾಗಿರುವ ಹೆಚ್ಚಿನವರಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಹಾಗೆ ಮಾಡಲು ಬೇಕಾದ ಪ್ರಮಾಣಪತ್ರಗಳು ಅವರಲ್ಲಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು ಹೇಳಿದರು.

‘‘ಸತ್ಯ ಶೋಧನಾ ಸಮಿತಿಯ ಅಧ್ಯಕ್ಷನಾಗಿ ಅಸ್ಸಾಮ್‌ಗೆ ಹೋಗಿದ್ದ ವೇಳೆ, ದಶಕಗಳ ಹಿಂದೆ ರಾಜ್ಯಕ್ಕೆ ಲಕ್ಷಾಂತರ ಮಂದಿ ವಲಸೆ ಬಂದಿರುವುದು ಗೊತ್ತಾಯಿತು. ಆದರೆ, ಈಗ ಅವರಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ’’ ಎಂದು ಅವರು ಹೇಳಿದರು.

‘‘ಜನಸಂಖ್ಯೆಯ 50 ಶೇಕಡಕ್ಕಿಂತಲೂ ಹೆಚ್ಚಿನ ಭಾಗ ಅನಕ್ಷರಸ್ತರಾಗಿರುವ ಹಾಗೂ ದಾಖಲೆಗಳನ್ನು ಸಂಗ್ರಹಿಸಿಡದ ದೇಶವೊಂದರಲ್ಲಿ, ತಮ್ಮ ಪೌರತ್ವವನ್ನು ಸಾಬೀತುಪಡಿಸುವಂತೆ ಸರಕಾರವು ಜನರನ್ನು ಕೇಳುತ್ತಿದೆ. ಅದು ಕೂಡ ಹಲವು ದಶಕಗಳ ಬಳಿಕ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News