×
Ad

ಬಿಲ್ ಪಾವತಿಸುವಂತೆ ಹೇಳಿದ್ದಕ್ಕಾಗಿ ಪೊಲೀಸರಿಂದ ಸುಳ್ಳು ಕೇಸು ದಾಖಲು: ಡಾಬಾ ಮಾಲಕನಿಂದ ಪ್ರತಿ ಹೋರಾಟ

Update: 2021-03-24 13:54 IST
photo: indianexpress

ಲಕ್ನೋ: ತನ್ನ ಢಾಬಾದಲ್ಲಿ  ಊಟ ಮಾಡಿದ್ದರ ಬಿಲ್ ಪಾವತಿಸುವಂತೆ  ಪೊಲೀಸರಿಗೆ ಹೇಳಿದ ಒಂದೇ ಕಾರಣಕ್ಕೆ ಸುಳ್ಳು ಆರೋಪಗಳ ಮೇಲೆ ತನ್ನ ಉದ್ಯೋಗಿಗಳ ಜತೆ  ಜೈಲುಪಾಲಾಗುವಂತಾದ ಇಟಾಹ್‍ನ ಡಾಬಾ ಮಾಲಕ ಬಿಡುಗಡೆಗೊಂಡ ಸುಮ್ಮನೆ ಕುಳಿತಿಲ್ಲ. ಇಂಜಿನಿಯರಿಂಗ್ ಪದವೀಧರನಾಗಿರುವ ಹಾಗೂ ರಸ್ತೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿರುವ ಈ ಡಾಬಾ ಮಾಲಕ ಪ್ರವೀಣ್ ಕೆ ಯಾದವ್ ಛಲದಿಂದ ಹೋರಾಡಿದ ಫಲವಾಗಿ ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರೇ ಜೈಲುಗಂಬಿ ಎಣಿಸುವ ಭೀತಿಯಲ್ಲಿದ್ದಾರೆ.

ಇಟಾಹ್ ಹೆಚ್ಚುವರಿ ಎಸ್ಪಿ ರಾಹುಲ್ ಕುಮಾರ್ ಅವರು ತನಿಖೆ ನಡೆಸಿದ ಫಲವಾಗಿ ಮಂಗಳವಾರ ಇನ್‍ ಸ್ಪೆಕ್ಟರ್  ಇಂದ್ರೇಶ್ ಪಾಲ್ ಸಿಂಗ್ ಹಾಗೂ ಇಬ್ಬರು ಹೆಡ್ ಕಾನ್‍ ಸ್ಟೇಬಲ್‍ ಗಳಾದ ಶೈಲೇಂದ್ರ ಹಾಗೂ ಸಂತೋಷ ಕುಮಾರ್ ವಿರುದ್ಧ ಎಫ್‍ಐಆರ್ ದಾಖಲಾಗಿವೆ. ಆರೋಪಿ ಪೊಲೀಸರು ಡಾಬಾದ ಕೆಲ ಗ್ರಾಹಕರನ್ನೂ ಸೇರಿಸಿ ಒಟ್ಟು 10 ಮಂದಿಯ ವಿರುದ್ಧ ಕಳೆದ ತಿಂಗಳು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರೆಂದು ತಿಳಿದು ಬಂದಿದೆ. ಡಾಬಾ ಮಾಲಕ ಪ್ರವೀಣ್ ಮತ್ತಾತನ ಸೋದರ ಬಿಲ್ ಪಾವತಿಸುವಂತೆ ಹೇಳಿದ್ದೇ ಇದಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಇದೀಗ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರ ವಿರುದ್ಧವೇ ಐಪಿಸಿಯ ಹಲವು ಸೆಕ್ಷನ್‍ಗಳನ್ವು ಪ್ರಕರಣ ದಾಖಲಾಗಿದೆ. ಕೊತ್ವಾಲಿ ದೇಹತ್ ಠಾಣೆಯ ಠಾಣಾಧಿಕಾರಿಯಾಗಿರುವ ಇಂದ್ರೇಶ್ ಅವರ ಠಾಣೆಯ ಸ್ಟ್ರಾಂಗ್ ರೂಂನಲ್ಲಿದ್ದ 1,400 ಪೆಟ್ಟಿಗೆ ಮಧ್ಯದ ಬಾಟಲಿಗಳು ಕಳೆದ ವಾರದ ದಾಳಿಯೊಂದರಲ್ಲಿ ಇಂದ್ರೇಶ್ ಬಳಿ ಪತ್ತೆಯಾದ ನಂತರ ಅವರನ್ನು ವಜಾಗೊಳಿಸಲಾಗಿತ್ತು.

ಶೈಲೇಂದ್ರ ಹಾಗೂ ಸಂತೋಷ್ ಕುಮಾರ್ ಅವರನ್ನೂ ವಜಾಗೊಳಿಸಲಾಗಿದೆ.

ಕಳ್ಳತನ ನಡೆಸಲು ಕೆಲ ಕ್ರಿಮಿನಲ್‍ಗಳು ಸಂಚು ಹೂಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಫೆಬ್ರವರಿ 4ರಂದು ಜಸ್ರಾಮ್ ಗ್ರಾಮದ ಢಾಬಾ ಮೇಲೆ ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿ ಪಿಸ್ತೂಲುಗಳು, ಮದ್ಯ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿ ಪೊಲೀಸರು ಹೇಳಿದ್ದರು.

ಆದರೆ ಡಾಬಾ ಮಾಲಕನ ಪ್ರಕಾರ ಆ ದಿನ ಅಪರಾಹ್ನ ಇಬ್ಬರು ಹೆಡ್ ಕಾನ್‍ಸ್ಟೇಬಲ್‍ಗಳು ಊಟ ಮಾಡಿ ಬಿಲ್ ರೂ. 450 ಆಗಿದ್ದರೂ ರೂ. 100 ಪಾವತಿಸಿದಾಗ ಸಂಪೂರ್ಣ ಮೊತ್ತ ಪಾವತಿಸುವಂತೆ ಹೇಳಿದಾಗ ನಿಂದಿಸಿ ಹೊರಟು ಹೋಗಿದ್ದರೂ ನಂತರ ಇತರ ಪೊಲಿಸರೊಂದಿಗೆ ಬಂದು ಡಾಬಾದಲ್ಲಿದ್ದ ಎಲ್ಲರಿಗೂ ಹಲ್ಲೆಗೈದು  ಬಂಧಿಸಿದ್ದರು.

"ಆದರೆ ನಾನು ಅಂಗವಿಕಲನಾಗಿರುವುದರಿಂದ ನನಗೆ ಅವರು ಹಲ್ಲೆಗೈದಿಲ್ಲ, ಹಾಗೆ ಮಾಡಿದರೆ ಇದೊಂದು ನಕಲಿ ಎನ್‍ಕೌಂಟರ್ ಎಂದು ತಿಳಿಯಬಹುದೆಂದು ಎಂದು ಅವರು ಅಂದುಕೊಂಡಿದ್ದರು," ಎಂದು ಪ್ರವೀಣ್ ವಿವರಿಸುತ್ತಾರೆ.

ಬಿಟೆಕ್ ಪದವೀಧರರಾಗಿರುವ ಪ್ರವೀಣ್ ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ತಮ್ಮ ಒಂದು ಕಾಲು ಕಳೆದುಕೊಂಡ ನಂತರ ಇದ್ದ ಉದ್ಯೋಗವೂ ಕೈಬಿಟ್ಟಿತ್ತು. ನಂತರ ಸೋದರನ ಜತೆ ಸೇರಿ ಢಾಬಾ ಆರಂಬಿಸಿದ್ದರು.

ಪ್ರಕರಣದಲ್ಲಿ ಬಿಡುಗಡೆಗೊಂಡ ನಂತರ ಮೇಲಧಿಕಾರಿಗಳಿಗೆ ಹಲವು ಪತ್ರಗಳನ್ನು ಬರೆದು ಆರೋಪಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಅವರು ಸಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News