ಪೊಲೀಸರಿಗೆ ಪರಮಾಧಿಕಾರ ನೀಡುವ ಹೊಸ ಮಸೂದೆ 'ಕ್ರೂರ' ಎಂದ ತೇಜಸ್ವಿ ಯಾದವ್
ಪಾಟ್ನಾ: ಮಂಗಳವಾರ ಬಿಹಾರ ವಿಧಾನಸಭೆಯಲ್ಲಿ ಮಂಡಿಸಲಾದ ಬಿಹಾರ ವಿಶೇಷ ಶಸ್ತ್ರಾಸ್ತ್ರ ಪೊಲೀಸ್ ಮಸೂದೆ 2021ರ ವಿರುದ್ಧ ಪ್ರತಿಭಟಿಸಿದ್ದ ವಿಪಕ್ಷ ಶಾಸಕರ ವಿರುದ್ಧ ಸದನದಲ್ಲಿ ನಡೆದ ದೌರ್ಜನ್ಯ ಹಾಗೂ ಕೋಲಾಹಲದ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಆರ್.ಜೆ.ಡಿ ನಾಯಕ ಹಾಗೂ ವಿಪಕ್ಷ ನಾಯಕ ತೇಜಸ್ವಿ ಯಾದವ್ ನೂತನ ಕಾಯಿದೆಯನ್ನು 'ಕ್ರೂರ' ಎಂದು ಬಣ್ಣಿಸಿದ್ದಾರೆ.
"ಈ ಕಾಯಿದೆಯು ಪೊಲೀಸರ ಕೈಗೆ ಪರಮಾಧಿಕಾರ ನೀಡುತ್ತದೆ ಹಾಗೂ ನಿತೀಶ್ ಸರಕಾರದ ಸರ್ವಾಧಿಕಾರಿ ನೀತಿಗೆ ಸಹಕಾರಿಯಾಗಲಿದೆ, ಈ ಕಾಯಿದೆಯನ್ನು ಪೊಲೀಸ್ ರಕ್ಷಣೆಯಲ್ಲಿ ಹಾಗೂ ದೌರ್ಜನ್ಯಕ್ಕೊಳಗಾದ ಶಾಸಕರನ್ನು ಪೊಲೀಸರಿಂದಲೇ ಹೊರಹಾಕಿಸಿ ಅಂಗೀಕರಿಸಲಾಗಿದೆ" ಎಂದು ಟ್ವೀಟ್ ಮಾಡಿರುವ ಯಾದವ್, ಜತೆಗೆ ವಿಧಾನಸಭೆಯೊಳಗೆ ಮಂಗಳವಾರ ನಡೆದ ಕೋಲಾಹಲದ ವೀಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ.
"ಈ ಹೊಸ ಕಾನೂನಿನಡಿ ಯಾರ ಮನೆಯನ್ನು ಬೇಕಾದರೂ ವಾರಂಟ್ ಇಲ್ಲದೆಯೇ ಶೋಧಿಸಬಹುದಾಗಿದೆ, ಏನಾದರೂ ತಪ್ಪಾಗಿದೆ ಎಂದು ಪೊಲೀಸರು ತಿಳಿದರೆ ಅವರು ಯಾರನ್ನು ಬೇಕಾದರೂ ಬಂಧಿಸಬಹುದು" ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.
"ನೋಡಿ ಪೊಲೀಸರು ಹೇಗೆ ನಮ್ಮ ಶಾಸಕರ ಜತೆ ಸದನದಲ್ಲಿ ವರ್ತಿಸುತ್ತಿದ್ದಾರೆ, ಲಜ್ಜೆಗೇಡು ಎಂದು ಅವರು ಬರೆದಿದ್ದಾರೆ. ವಿಧಾನಸಭಾ ಕಟ್ಟಡದ ಹೊರಗೆ ಕೆಲ ಶಾಸಕಿಯರನ್ನೂ ಮಹಿಳಾ ಭದ್ರತಾ ಸಿಬ್ಬಂದಿಗಳು ಹೊತ್ತು ಹೊರಕ್ಕೆ ಸಾಗಿಸಿರುವ ವೀಡಿಯೋಗಳೂ ಹರಿದಾಡುತ್ತಿವೆ. ಗಾಯಗೊಂಡ ಒಬ್ಬ ಶಾಸಕರನ್ನು ಸ್ಟ್ರೆಚರಿನಲ್ಲಿ ಹೊರ ಸಾಗಿಸಲಾಯಿತು. "ನನ್ನ ಸಹ ಶಾಸಕ, ಸತೀಶ್ ದಾಸ್ ಬಡ ಕುಟುಂಬದವರು. ನಿತೀಶ್ ಕುಮಾರ್ ಅವರ ದಬ್ಬಾಳಿಕೆಗೆ ಬಲಿಪಶುವಾಗಿದ್ದಾರೆ. ಅವರಿಗೆ ತಲೆಗೆ ಗಾಯವಾಗಿದೆ, ಈ ಚಿತ್ರ ಅದಕ್ಕೆ ಸಾಕ್ಷಿ" ಎಂದು ತೇಜಸ್ವಿ ಬರೆದಿದ್ದಾರೆ.