ಕ್ರೈಸ್ತ ಸನ್ಯಾಸಿನಿಯರಿಗೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ: ಗೃಹ ಸಚಿವಾಲಯಕ್ಕೆ ಪತ್ರ ಬರೆದ ಪಿಣರಾಯಿ ವಿಜಯನ್

Update: 2021-03-24 10:38 GMT

ಹೊಸದಿಲ್ಲಿ: ಧಾರ್ಮಿಕ ಮತಾಂತರ ನಡೆಸುತ್ತಿದ್ದಾರೆಂಬ ಶಂಕೆಯಿಂದ ಇಬ್ಬರು ಕ್ರೈಸ್ತ ಭಗಿನಿಯರು ಹಾಗೂ ಇತರ ಇಬ್ಬರು ತರಬೇತಿ ಪಡೆಯುತ್ತಿರುವ ಭಗಿನಿಯರು ಸೇರಿದಂತೆ ನಾಲ್ಕು ಮಂದಿಯನ್ನು ನಿಂದಿಸಿ, ಹಲ್ಲೆಗೈದು ಅವರನ್ನು ಉತ್ತರ ಪ್ರದೇಶದ ಝಾನ್ಸಿ ನಿಲ್ದಾಣದಲ್ಲಿ ರೈಲಿನಿಂದ ಎಬಿವಿಪಿ ಮತ್ತು ಬಜರಂಗದಳ ಸದಸ್ಯರು ಕೆಳಗಿಳಿಸಿರುವ ಘಟನೆ ವಿವಾದಕ್ಕೀಡಾಗಿತ್ತು. ಆದರೆ ನಾಲ್ಕು ಮಂದಿಯೂ ಯಾವುದೇ ಮತಾಂತರ ಕಾರ್ಯದಲ್ಲಿ ಭಾಗಿಯಾಗಿಲ್ಲ ಎಂದು ರೈಲ್ವೆ ನಿಲ್ದಾಣದಲ್ಲಿ ನಡೆದ ವಿಚಾರಣೆಯಲ್ಲಿ ದೃಢ ಪಟ್ಟ ನಂತರ ಅವರನ್ನು ಪ್ರಯಾಣ ಮುಂದುವರಿಸಲು ಅನುಮತಿಸಲಾಗಿತ್ತು.

ಕಳೆದ ಶುಕ್ರವಾರ  ನಡೆದ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. "ಇಂತಹ ಘಟನೆಗಳು ರಾಷ್ಟ್ರದ ಪ್ರತಿರೂಪವನ್ನು ಮತ್ತು ಅದರ ಪ್ರಾಚೀನ ಧಾರ್ಮಿಕ ಸಹಿಷ್ಣುತೆಯನ್ನು ಕೆಡಿಸುತ್ತವೆ. ಇಂತಹ ಘಟನೆಗಳಿಗೆ ಕೇಂದ್ರ ಸರ್ಕಾರವು ತೀವ್ರ ಖಂಡನೆ ವ್ಯಕ್ತಪಡಿಸಬೇಕಾಗುತ್ತದೆ. ಇಂತಹಾ ಎಲ್ಲ ಗುಂಪುಗಳು, ಜನರನ್ನು ಅಡ್ಡಿಪಡಿಸುವ, ದುರ್ಬಲಗೊಳಿಸುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲು ತಾವು ಹಸ್ತಕ್ಷೇಪ ಮಾಡುವಂತೆ ನಾನು ವಿನಂತಿಸುತ್ತೇನೆ. ಸಂವಿಧಾನವು ಖಾತರಿಪಡಿಸಿದ ವೈಯಕ್ತಿಕ ಹಕ್ಕುಗಳ ಸ್ವಾತಂತ್ರ್ಯವನ್ನು ಉಳಿಸಬೇಕು" ಎಂದು ಮುಖ್ಯಮಂತ್ರಿ ಬರೆದಿದ್ದಾರೆ.

ಈ ಕರುತಾದಂತೆ ಇಂದು ಪ್ರತಿಕ್ರಿಯಿಸಿರುವ ಗೃಹ ಸಚಿವ ಅಮಿತ್ ಶಾ ಈ ಘಟನೆಯಲ್ಲಿ ಶಾಮೀಲಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಭಗಿನಿಯರು ಹರಿದ್ವಾರ-ಪುರಿ-ಉತ್ಕಲ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯ ಕುರಿತಾದ 25 ಸೆಕೆಂಡ್ ಅವಧಿಯ ವೀಡಿಯೋದಲ್ಲಿ ರೈಲಿನ ಬೋಗಿಯಲ್ಲಿ ಭಗಿನಿಯರನ್ನು ಕೆಲ ವ್ಯಕ್ತಿಗಳು  ಹಾಗೂ ಕೆಲ ಪೊಲೀಸರು ಸುತ್ತುವರಿದಿರುವುದು ಕಾಣಿಸುತ್ತದೆ.‌ ಇದುವರೆಗೂ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News