ಬೀಫ್‌ ನಿಷೇಧಿಸಲು ಹೇಗೆ ಸಾಧ್ಯ?, ಅದು ಭಾರತದ ರಾಷ್ಟ್ರೀಯ ಖಾದ್ಯ: ಬಿಜೆಪಿ ಅಭ್ಯರ್ಥಿ ಹೇಳಿಕೆ

Update: 2021-03-24 12:21 GMT

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ  ಬಿಜೆಪಿ ಅಭ್ಯರ್ಥಿಯೊಬ್ಬರು ಬೀಫ್ ಭಾರತದ ʼರಾಷ್ಟ್ರೀಯ ಖಾದ್ಯ' ಎಂದ ಹೇಳಿ ಎಲ್ಲರ ಹುಬ್ಬೇರಿಸಿದ್ದಾರೆ.

ಈ ಕುರಿತಾದಂತೆ ಸುದ್ದಿಯಲ್ಲಿರುವವರು ಗೌರಿಪುರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬನೇಂದ್ರ ಕುಮಾರ್ ಮುಷಾರಿ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಕುಮಾರ್ "ಬೀಫ್‌ ಭಾರತದ ರಾಷ್ಟ್ರೀಯ ಖಾದ್ಯ" ಎಂದು ಹೇಳಿದ್ದಾರೆ.

"ಯಾರಾದರೂ ಬೀಫ್ ನಿಷೇಧಿಸುವುದು ಹೇಗೆ ಸಾಧ್ಯ? ಅದು ಭಾರತದ ರಾಷ್ಟ್ರೀಯ ಖಾದ್ಯ," ಎಂದು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಿಜೆಪಿ ಸೇರಿದ್ದ ಕುಮಾರ್ ಹೇಳಿ ಈ ಮೂಲಕ ಮುಸ್ಲಿಂ ಮತದಾರರ ಓಲೈಕೆ ಯತ್ನ ಮಾಡಿದ್ದಾರೆ.

"ಬೀಫ್ ಒಂದು ಅಂತರಾಷ್ಟ್ರೀಯ ಖಾದ್ಯ. ಅಸ್ಸಾಂನಲ್ಲಿ ಅಥವಾ ಭಾರತದ ಬೇರೆಲ್ಲಿಯೂ ಯಾರು ಕೂಡ ಬೀಫ್ ನಿಷೇಧಿಸಲು ಸಾಧ್ಯವಿಲ್ಲವೆಂದು ಅಸ್ಸಾಂನ ಗ್ರಾಮೀಣ ಭಾಗದ ಸುಶಿಕ್ಷಿತ ಮುಸ್ಲಿಮರು ತಿಳಿಯಬೇಕು," ಎಂದು ಅವರು ಹೇಳಿದರು.

ಈ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ, ಅಸ್ಸಾಂ ಗಣ ಪರಿಷದ್ ಅಭ್ಯರ್ಥಿಯಾಗಿ ಹಾಗೂ ಬೋಡೋ ಪೀಪಲ್ಸ್ ಫ್ರಂಟ್ ಅಭ್ಯರ್ಥಿಯಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕುಮಾರ್ ಅವರ ಹೇಳಿಕೆಯನ್ನು  ಬಿಜೆಪಿ ನಾಯಕರು ಖಂಡಿಸಿ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಪುರಬಂಚಲ್ ಹಿಂದೂ ಐಕ್ಯ ಮಂಚ್ ಸದಸ್ಯರು ಬನೇಂದ್ರ ಕುಮಾರ್ ಮುಷಾರಿ ವಿರುದ್ಧ ದಿಸ್ಪೂರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News