ನಾಲ್ಕು ಕೊಲೆ, ಒಂದು ಬಂಧನದ ಬಳಿಕ ಬಸ್ತಾರ್ ಪೊಲೀಸರ ವಿರುದ್ಧ ಭುಗಿಲೆದ್ದ ಆದಿವಾಸಿ ಮಹಿಳೆಯರ ಆಕ್ರೋಶ

Update: 2021-03-24 14:18 GMT

ದಾಂತೆವಾಡಾ(ಛತ್ತೀಸ್ಗಡ),ಮಾ.24: ಅಂತರರಾಷ್ಟ್ರೀಯ ಮಹಿಳೆಯರ ದಿನವಾಗಿದ್ದ ಮಾ.8ರಂದು ಛತ್ತೀಸ್ಗಡ ಪೊಲೀಸರು ಮಹಿಳೆಯರ ವಿರುದ್ಧ ಅಪರಾಧಗಳಿಗೆ ‘ಶೂನ್ಯ ಸಹಿಷ್ಣುತೆ ’ಯನ್ನು ಉತ್ತೇಜಿಸಲು ರಾಜ್ಯ ರಾಜಧಾನಿ ರಾಯಪುರದಲ್ಲಿ ಮೂರು ಕಿ.ಮೀ.ದೂರದ ಪಥ ಸಂಚಲನವನ್ನು ಆಯೋಜಿಸಿದ್ದರು. ಅದೇ ದಿನ 400 ಕಿ.ಮೀ.ದೂರದ ಸಂಘರ್ಷ ಪೀಡಿತ ಬಸ್ತಾರ್ ಪ್ರದೇಶದ 500ಕ್ಕೂ ಅಧಿಕ ಆದಿವಾಸಿ ಮಹಿಳೆಯರು ಕಿ.ಮೀ.ಗಟ್ಟಲೆ ದೂರ ನಡೆದುಕೊಂಡು ಬಂದು ಪೊಲೀಸರ ದೌರ್ಜನ್ಯಗಳಿಗೆ ಬಲಿಯಾಗಿದ್ದ ಇಬ್ಬರು ಮಹಿಳೆಯರ ಸ್ಮರಣಾರ್ಥ ಛತ್ತೀಸ್ಗಡ ಮಹಿಳಾ ಅಧಿಕಾರ್ ಮಂಚ್ ಮತ್ತು ಜೈಲ್ ಬಂದಿ ರಿಹಾಯಿ ಮಂಚ್ ಸಮೇಲಿ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯು ಅವಸರದಲ್ಲಿ ಮುಕ್ತಾಯಗೊಂಡಿತ್ತು. ಅಲ್ಲಿಗೆ ದಾಳಿಯಿಟ್ಟಿದ್ದ ಪೊಲೀಸರು ಸಭೆಗೆ ಜನರನ್ನು ಸೇರಿಸಲು ನೆರವಾಗಿದ್ದ ದಾಂತೆವಾಡಾದ ಬರ್ಗಮ್ ಗ್ರಾಮದ ಸಾಮಾಜಿಕ ಕಾರ್ಯಕರ್ತೆ ಹಿದ್ಮೆ ಮರ್ಕಮ್ (28)ಳನ್ನು ಬಂಧಿಸಿದ್ದರು.

ಮರ್ಕಮ್ ತಲೆಮರೆಸಿಕೊಂಡಿದ್ದ ಮಾವೋವಾದಿ ಬಂಡುಕೋರಳಾಗಿದ್ದು,2016-2020ರ ನಡುವೆ ಆಕೆಯ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸರಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮಾಜಿ ಉದ್ಯೋಗಿ ಮರ್ಕಮ್ ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದೂ ನಾಗರಿಕ ಹಕ್ಕುಗಳ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಳು ಮತ್ತು ಯಾವುದೇ ಬಹಿರಂಗ ಸಭೆಯನ್ನು ಅದು ದೊಡ್ಡದಿರಲಿ ಅಥವಾ ಸಣ್ಣದಿರಲಿ,ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂದು ಬಸ್ತಾರ್ನ ಸಾಮಾಜಿಕ ಕಾರ್ಯಕರ್ತರು ಬೆಟ್ಟು ಮಾಡಿದ್ದಾರೆ.

ಮಾಜಿ ಶಾಲಾ ಶಿಕ್ಷಕಿಯಾಗಿದ್ದು, ಪೊಲೀಸ್ ಪ್ರಕರಣಗಳ ವಿರುದ್ಧ ಹೋರಾಡುತ್ತಲೇ ಪ್ರದೇಶದಲ್ಲಿ ಪ್ರಮುಖ ನಾಯಕಿಯಾಗಿ ಹೊರಹೊಮ್ಮಿರುವ ಸೋನಿ ಸೋರಿ,ತಾನು ಸರಕಾರಿ ಅಧಿಕಾರಿಗಳನ್ನು ಭೇಟಿಯಾದಾಗಲೆಲ್ಲ ತನ್ನ ಜೊತೆ ಮರ್ಕಮ್ ಇರುತ್ತಿದ್ದಳು. ತೀರ ಇತ್ತೀಚಿಗೆ ಅಂದರೆ ಫೆ.10ರಂದು ಜಗದಾಳಪುರದಲ್ಲಿ ಛತ್ತೀಸ್ಗಡದ ರಾಜ್ಯಪಾಲರನ್ನು ತಾವಿಬ್ಬರೂ ಭೇಟಿಯಾಗಿದ್ದೇವು ಎಂದು ತಿಳಿಸಿದರು. ಸೋರಿ 2014ರಲ್ಲಿ ಆಮ್ ಆದ್ಮಿ ಪಾರ್ಟಿಯ ಟಿಕೆಟ್ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಹಿದ್ಮೆ ಮರ್ಕಮ್

Scroll.in ಸುದ್ದಿ ಜಾಲತಾಣ ನೀಡಿದ ಸಂದರ್ಶನದಲ್ಲಿ ಮರ್ಕಮ್ ಬಂಧನವನ್ನು ಸಮರ್ಥಿಸಿಕೊಂಡ ದಾಂತೆವಾಡಾ ಎಸ್ಪಿ ಅಭಿಷೇಕ್ ಪಲ್ಲವ ಅವರು,‌ ಶರಣಾಗತರಾಗಿರುವ ಮಾವೋವಾದಿಗಳು ಮರ್ಕಮ್‌ ಳನ್ನು ‘ಜನತಾನಾ ಸರಕಾರ’ ಅಥವಾ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ) ಸರಕಾರದ ನಾಯಕಿ ಎಂದು ಗುರುತಿಸಿದ್ದಾರೆ ಎಂದು ಹೇಳಿದರು.
 
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಜೈಲ್ ಬಂದಿ ರಿಹಾಯಿ ಮಂಚ್ನ ಕಾರ್ಯದರ್ಶಿ ಸುಜಿತ್ ಕಾಮ್ರಾ ಅವರು, ಎಸ್ಪಿ ಸಹ ಹಲವಾರು ಸಂದರ್ಭಗಳಲ್ಲಿ ಮರ್ಕಮ್ಳನ್ನು ಭೇಟಿಯಾಗಿದ್ದಾರೆ, ಹೀಗಿರುವಾಗ ಮರ್ಕಮ್ ತನ್ನ ತಲೆಯ ಮೇಲೆ ಒಂದು ಲಕ್ಷ ರೂ.ಗಳ ಬಹುಮಾನವನ್ನು ಹೊತ್ತಿದ್ದಳು ಎಂದು ಅವರು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು. ಮರ್ಕಮ್ ಕೂಡ ಮಂಚ್ನ ಸದಸ್ಯೆಯಾಗಿದ್ದಾಳೆ.‌

ಹಿದ್ಮೆ ಮರ್ಕಮ್ ಮಾವೋವಾದಿ ಚಟುವಟಿಕೆಗಳಲ್ಲಿ ಸಕ್ರಿಯಳಾಗಿದ್ದನ್ನು ಸಾಬೀತುಗೊಳಿಸಲು ಮಾವೋವಾದಿಗಳ ಹೆಸರುಗಳಿರುವ ಕೈಪಿಡಿಯೊಂದನ್ನು ಎಸ್ಪಿ ಉಲ್ಲೇಖಿಸಿದರು. Scroll.in ಈ ಕೈಪಿಡಿಯನ್ನು ಪರಿಶೀಲಿಸಿದಾಗ ಬರ್ಗಮ್ ಗ್ರಾಮದ ಪೆರಂಪರ ಹಾಡಿಯ ನಿವಾಸಿ ಕವಾಸಿ ಹಿದ್ಮೆ ಎಂಬಾಕೆಯ ಹೆಸರು ಅದರಲ್ಲಿತ್ತು. ಬಂಧಿತ ಕಾರ್ಯಕರ್ತೆ ಹಿದ್ಮೆ ಮರ್ಕಮ್ ಆಕೆಯ ಆಧಾರ್ ಕಾರ್ಡಿನಲ್ಲಿರುವಂತೆ ಬರ್ಗಮ್ ಗ್ರಾಮದ ಕೊವಾಸಿಪಾರಾ ಹಾಡಿಯ ನಿವಾಸಿಯಾಗಿದ್ದಾಳೆ.

ಮರ್ಕಮ್ ವಿರುದ್ಧದ ಕ್ರಮವು ಆದಿವಾಸಿ ಮಹಿಳೆಯರ ಮೇಲಿನ ಪೊಲೀಸ್ ದೌರ್ಜನ್ಯಗಳನ್ನು ಮತ್ತೊಮ್ಮೆ ಬೆಟ್ಟು ಮಾಡುತ್ತಿದೆ ಎನ್ನುತ್ತಾರೆ ಕಾರ್ಯಕರ್ತರು.


 
ಪಂಡೆ ಕೊವಾಸಿ (27) ಎಂಬ ಯುವತಿ ಫೆ.23ರಂದು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಳು. ಕೊವಾಸಿ ಮಾವೋವಾದಿ ಗುಂಪಿಗೆ ಸೇರಿದ್ದಳು ಮತ್ತು ಸರಕಾರದ ‘ಮರಳಿ ಮನೆಗೆ ’ಯೋಜನೆಯಡಿ ಸ್ವಯಂಇಚ್ಛೆಯಿಂದ ಶರಣಾಗಿದ್ದಳು ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಪಂಡೆ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಳು ಎನ್ನುವುದನ್ನು ಬಲವಾಗಿ ನಿರಾಕರಿಸಿರುವ ಆಕೆಯ ಕುಟುಂಬವು ಪೊಲೀಸರು ತಮ್ಮ ಪುತ್ರಿಯನ್ನು ಗ್ರಾಮದಿಂದ ಬಲಾತ್ಕಾರದಿಂದ ಎಳೆದೊಯ್ದಿದ್ದರು ಎಂದು ಆರೋಪಿಸಿದ್ದಾರೆ.

ಪಂಡೆ ಇತರ ಶರಣಾಗತ ಮಾವೋವಾದಿ ಮಹಿಳೆಯರೊಂದಿಗೆ ಪೊಲೀಸ್ ಕಸ್ಟಡಿಯಲ್ಲೇ ಮುಂದುವರಿಯಲು ಬಯಸಿದ್ದಳು, ಆದರೆ ಮನೆಗೆ ಮರಳುವಂತೆ ಕುಟುಂಬದವರ ಒತ್ತಡದಿಂದಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದಾರೆ ಪೊಲೀಸರು.

ಪಂಡೆಯ ಶವವನ್ನು ಪೊಲೀಸರು ತಮಗೆ ಹಸ್ತಾಂತರಿದಾಗ ದೈಹಿಕ ಮತ್ತು ಲೈಂಗಿಕ ಹಲ್ಲೆಯ ಗುರುತುಗಳಿದ್ದವು ಎಂದು ಆರೋಪಿಸಿರುವ ಆಕೆಯ ತಾಯಿ ತನ್ನ ಮಗಳ ಸಾವಿನ ಕುರಿತು ಸ್ವತಂತ್ರ ತನಿಖೆಗೆ ಕೋರಿ ಛತ್ತೀಸ್ಗಡ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.
 
ಇನ್ನೊಂದು ಪ್ರಕರಣದಲ್ಲಿ ಸಮೇಲಿ ಗ್ರಾಮದ 16 ಹರೆಯದ ಬಾಲಕಿ 2018,ಡಿಸೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೂರು ತಿಂಗಳ ಮೊದಲು ಸರಕಾರಿ ಭದ್ರತಾ ಪಡೆಗಳ ಸಿಬ್ಬಂದಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ಹಳ್ಳವೊಂದರ ಬಳಿ ಎಸೆದು ಹೋಗಿದ್ದರು. ವಾರಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಚೇತರಿಸಿಕೊಂಡು ಮನೆಗೆ ವಾಪಸಾಗಿದ್ದಳಾದರೂ ಆಘಾತದಿಂದ ಹೊರಬರಲು ಆಕೆಗೆ ಸಾಧ್ಯವಾಗಿರಲಿಲ್ಲ ಮತ್ತು ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಳು. ಗ್ರಾಮದ ಯಾವ ಹುಡುಗಿಗೂ ಇಂತಹ ಗತಿ ಬರಬಾರದು ಎಂದು ಮೃತ ಬಾಲಕಿಯ ತಾಯಿ ಹೇಳಿದರು.
 
ಡಿ.28ರಂದು ಪಲ್ನಾರ್ ಬಳಿ ಮಾಂಡವಿ (30) ಮತ್ತು ವಿಜ್ಜೆ ಮರ್ಕಮ್ (25) ಎಂಬ ಇನ್ನಿಬ್ಬರು ಆದಿವಾಸಿ ಯುವತಿಯರನ್ನು ಪೊಲೀಸರು ಕೊಂದಿದ್ದರು. ಅವರು ಮಾವೋವಾದಿಗಳಾಗಿದ್ದರು ಎಂಬ ಪೊಲೀಸರ ವಾದವನ್ನು ಅಲ್ಲಗಳೆದಿರುವ ಸಾಮಾಜಿಕ ಕಾರ್ಯಕರ್ತರು ಅವರನ್ನು ಅನ್ಯಾಯವಾಗಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ.

ಭೀಮೆ ಮಾಂಡವಿಯ ತಾಯಿ ಮತ್ತು ಸೋನಿ ಸೂರಿ

ಪೊಲೀಸ್ ಪಡೆಯ ಜಿಲ್ಲಾ ರಿಜರ್ವ್ ಗಾರ್ಡ್ ಮತ್ತು ದಾಂತೇಶ್ವರಿ ಫೈಟರ್ಸ್ ಘಟಕಗಳಿಗೆ ಸೇರ್ಪಡೆಗೊಂಡಿರುವ ಶರಣಾಗತ ಮಾವೋವಾದಿಗಳನ್ನು ಸರಕಾರದ ವಿರುದ್ಧ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವವರನ್ನು ದಮನಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಸೋರಿ ಹೇಳಿದರು. ತಮ್ಮದೇ ಸಮುದಾಯದ ಈ ಶರಣಾಗತ ಮಾವೋವಾದಿಗಳಿಂದಾಗಿ ಆದಿವಾಸಿ ಮಹಿಳೆಯರಲ್ಲಿ ಅಭದ್ರತೆಯ ಭಾವನೆ ಹೆಚ್ಚುತ್ತಿದೆ ಮತ್ತು ಇದು ಅತ್ಯಂತ ಆತಂಕಕಾರಿಯಾಗಿದೆ ಎಂದರು.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News