ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಬಳಕೆಯಾಗುವ ಸಾಧ್ಯತೆಯಿದೆ: ಸುಪ್ರೀಂ ಕೋರ್ಟ್

Update: 2021-03-24 15:54 GMT

ಹೊಸದಿಲ್ಲಿ,ಮಾ.24: ಪ.ಬಂಗಾಳ,ಅಸ್ಸಾಂ,ತಮಿಳುನಾಡು,ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಚುನಾವಣಾ ಬಾಂಡ್‌ಗಳ ಇನ್ನಷ್ಟು ಮಾರಾಟವನ್ನು ತಡೆಯುವಂತೆ ಕೋರಿ ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಬುಧವಾರ ಸರ್ವೋಚ್ಚ ನ್ಯಾಯಾಲಯವು ಕಾದಿರಿಸಿದೆ,ಆದರೆ ಈ ಬಾಂಡ್‌ಗಳ ಸಂಭಾವ್ಯ ದುರುಪಯೋಗದ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.

 ರಾಜಕೀಯ ಪಕ್ಷವೊಂದು 100 ಕೋ.ರೂ.ಗಳ ಬಾಂಡ್‌ಗಳನ್ನು ಸ್ವೀಕರಿಸಿದರೆ ಅಕ್ರಮ ಚಟುವಟಿಕೆಗಳಿಗೆ ಅಥವಾ ರಾಜಕೀಯ ಅಜೆಂಡಾದ ಹೊರತಾದ ಉದ್ದೇಶಗಳಿಗೆ ಈ ಬಾಂಡ್‌ಗಳ ಬಳಕೆಯ ಮೇಲೆ ಯಾವ ನಿಯಂತ್ರಣವಿದೆ ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು,ಈ ಬಗ್ಗೆ ಗಮನ ಹರಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿತು.

ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲು ಬಾಂಡ್‌ಗಳ ಹಣ ಬಳಕೆಯಾಗಬಹುದು ಎಂದು ಆತಂಕವನ್ನೂ ನ್ಯಾಯಾಲಯವು ವ್ಯಕ್ತಪಡಿಸಿತು. ಭೀತಿವಾದದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳಿವೆ ಎಂದ ಬೋಬ್ಡೆ,‘ನಾವು ಹೇಳುತ್ತಿರುವುದರ ಬಗ್ಗೆ ನಮಗೆ ಖಚಿತವಿಲ್ಲ,ಆದರೆ ಭಯೋತ್ಪಾದನೆಗೆ ಆರ್ಥಿಕ ನೆರವು ಒದಗಿಸುವ ಸಾಧ್ಯತೆಯ ಈ ಕೋನದ ಬಗ್ಗೆ ಪರಿಶೀಲನೆ ಅಗತ್ಯವಾಗಿದೆ ’ ಎಂದು ಹೇಳಿದರು.

ವಿಧಾನಸಭಾ ಚುನಾವಣೆಗಳಿಗೆ ಮುನ್ನ ಚುನಾವಣಾ ಬಾಂಡ್‌ಗಳ ಮಾರಾಟವು ಬೇನಾಮಿ ಕಂಪನಿಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅಕ್ರಮ ಹಣದ ಹರಿವನ್ನು ಹೆಚ್ಚಿಸಲಿದೆ ಎಂದು ಎಡಿಆರ್ ತನ್ನ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿತ್ತು.

ಚುನಾವಣಾ ಬಾಂಡ್‌ಗಳ ಯೋಜನೆಯು 2018ರಲ್ಲಿ ಆರಂಭಗೊಂಡಿದ್ದು ಎಲ್ಲ ರಾಜಕೀಯ ದೇಣಿಗೆಗಳನ್ನು ಬ್ಯಾಂಕ್‌ಗಳ ಮೂಲಕವೇ ನೀಡಲಾಗುತ್ತಿದೆ,ಹೀಗಾಗಿ ಕಪ್ಪುಹಣವು ನಿಯಂತ್ರಣದಲ್ಲಿದೆ ಎಂದು ಕೇಂದ್ರದ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ವಾದಿಸಿದರೆ,ಚುನಾವಣಾ ಆಯೋಗವು ಬಾಂಡ್‌ಗಳ ಮಾರಾಟಕ್ಕೆ ವಿರುದ್ಧವಾಗಿಲ್ಲ,ಆದರೆ ಬಾಂಡ್‌ಗಳ ಅನಾಮಧೇಯತೆಯ ಬಗ್ಗೆ ಅದು ಕಳವಳಗಳನ್ನು ವ್ಯಕ್ತಪಡಿಸಿದೆ ಎಂದು ಆಯೋಗದ ಪರ ಹಿರಿಯ ವಕೀಲ ರಾಕೇಶ ದ್ವಿವೇದಿ ಹೇಳಿದರು.

ಅನಾಮಧೇಯ ಚುನಾವಣಾ ಬಾಂಡ್‌ಗಳ ಮಾರಾಟದ ಕುರಿತು ಆರ್‌ಬಿಐ ಮತ್ತು ಚುನಾವಣಾ ಆಯೋಗ ಎತ್ತಿರುವ ಆಕ್ಷೇಪಗಳನ್ನು ಪ್ರಮುಖವಾಗಿ ಬಿಂಬಿಸಿದ ಅರ್ಜಿದಾರರ ಪರ ವಕೀಲ ಪ್ರಶಾಂತ ಭೂಷಣ ಅವರು,ಇದು ಬೇನಾಮಿ ಕಂಪನಿಗಳು ಲಂಚಗಳನ್ನು ನೀಡಲು ಸುಗಮ ಮಾರ್ಗ ಕಲ್ಪಿಸುವ ಕಾನೂನುಬದ್ಧ ಭ್ರಷ್ಟಾಚಾರದ ಒಂದು ರೂಪವಾಗಿದೆ ಎಂದು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News