ಅನಿಲ್ ದೇಶ್‌ಮುಖ್ ಪ್ರಕರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

Update: 2021-03-24 16:25 GMT

ಹೊಸದಿಲ್ಲಿ, ಮಾ.24: ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್‌ಮುಖ್ ವಿರುದ್ಧದ ಭ್ರಷ್ಟಾಚಾರ ಆರೋಪದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶಿಸುವಂತೆ ಕೋರಿ ಮುಂಬೈ ಪೊಲೀಸ್ ಮಾಜಿ ಆಯುಕ್ತ ಪರಮ್‌ಬೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ.

ಇದು ಗಂಭೀರ ವಿಷಯವಾಗಿದ್ದರೂ, ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು. ಸುಪ್ರೀಂಕೋರ್ಟ್‌ಗೆ ಅಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ನ್ಯಾ ಎಸ್‌ಕೆ ಕೌಲ್ ಮತ್ತು ಆರ್ ಸುಭಾಷ್ ರೆಡ್ಡಿ ಅವರಿದ್ದ ನ್ಯಾಯಪೀಠ ಸೂಚಿಸಿದೆ. ಬಳಿಕ ಪರಮ್‌ಬೀರ್ ಸಿಂಗ್ ಸುಪ್ರೀಂಕೋರ್ಟ್‌ನಿಂದ ತನ್ನ ಅರ್ಜಿ ಹಿಂಪಡೆದಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ನಿವಾಸದ  ಬಳಿ ಸ್ಫೋಟಕವಿದ್ದ ವಾಹನ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತನ್ನನ್ನು ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿರುವ ರಾಜ್ಯಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆಯೂ ಅರ್ಜಿಯಲ್ಲಿ ಕೋರಿದ್ದರು.

ರಾಜ್ಯವೊಂದರ ಆಡಳಿತದ ಮೇಲೆ ಗಂಭೀರ ಪ್ರಮಾಣ ಬೀರಬಹುದಾದ ವಿಷಯವಿದು. ಆದರೆ ಇದನ್ನು ಸುಪ್ರೀಂಕೋರ್ಟ್‌ನೆದುರು 32ನೇ ಪರಿಚ್ಛೇದದಡಿ ಸಲ್ಲಿಸುವ ಬದಲು ಹೈಕೋರ್ಟ್‌ನಲ್ಲಿ 226ನೇ ಪರಿಚ್ಚೇದದಡಿ ಸಲ್ಲಿಸಬೇಕು. ಅಲ್ಲದೆ ಸಚಿವ ದೇಶ್‌ಮುಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದರೂ ಅವರನ್ನು ಪ್ರಕರಣದ ಒಂದು ಕಕ್ಷಿದಾರನಾಗಿ ಯಾಕೆ ಹೆಸರಿಸಿಲ್ಲ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿಯನ್ನು ಸುಪ್ರೀಂಕೋರ್ಟ್‌ನಿಂದ ಹಿಂಪಡೆದು ಬುಧವಾರವೇ ಹೈಕೋರ್ಟ್‌ನೆದುರು ಸಲ್ಲಿಸುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News