×
Ad

"ಕೇರಳದ ಜನರು ವಿದ್ಯಾವಂತರಾಗಿರುವ ಕಾರಣ ಇಲ್ಲಿ ಬಿಜೆಪಿ ವೇಗವಾಗಿ ಬೆಳೆಯುತ್ತಿಲ್ಲ"

Update: 2021-03-24 22:34 IST

ತಿರುವನಂತಪುರಂ: ಬಿಜೆಪಿಯ ಹಿರಿಯ ಮುಖಂಡ ಹಾಗೂ ಪಕ್ಷದ ಏಕೈಕ ಶಾಸಕ ಒ ರಾಜಗೋಪಾಲ್ ಅವರು ಕೇರಳದಲ್ಲಿ ಪಕ್ಷ ಏಕೆ ವೇಗವಾಗಿ ಬೆಳೆಯುತ್ತಿಲ್ಲ ಎಂಬ ಪ್ರಶ್ನೆಗೆ ಆಸಕ್ತಿದಾಯಕ ಉತ್ತರ ನೀಡಿದ್ದಾರೆ. ಕೇರಳದಲ್ಲಿ ಬಿಜೆಪಿ ಪಕ್ಷವು ವೇಗವಾಗಿ ಬೆಳೆಯದಿರಲು ರಾಜ್ಯದ ಶಿಕ್ಷಣ ಮಟ್ಟವೇ ಕಾರಣ ಎಂದು ಅವರು ಹೇಳಿದ್ದಾರೆ. "ಸಾಕ್ಷರತೆಯು ಒಂದು ಪ್ರಮುಖ ಅಂಶವಾಗಿದೆ ಮತ್ತು ಕೇರಳದ ಸಾಕ್ಷರತೆಯ ಪ್ರಮಾಣವು 90 ಪ್ರತಿಶತದಷ್ಟಿದೆ. ಆದ್ದರಿಂದಲೇ ರಾಜ್ಯದಲ್ಲಿ ಪಕ್ಷ ವೇಗವಾಗಿ ಬೆಳೆಯುತ್ತಿಲ್ಲ" ಎಂದು ಅವರು ಹೇಳಿಕೆ ನೀಡಿದ್ದಾರೆ.

“ಕೇರಳವು ಹಲವಾರು ವ್ಯತ್ಯಾಸಗಳನ್ನು ಹೊಂದಿರುವ ರಾಜ್ಯವಾಗಿದೆ. ಈ ರಾಜ್ಯಕ್ಕೆ ಎರಡು-ಮೂರು ವಿಭಿನ್ನ ಅಂಶಗಳಿವೆ. ಕೇರಳದಲ್ಲಿ ಶೇಕಡಾ 90 ರಷ್ಟು ಸಾಕ್ಷರತೆ ಇದೆ. ಅವರು ಎಲ್ಲಾ ವಿಚಾರಗಳಲ್ಲೂ ಯೋಚಿಸುತ್ತಾರೆ ಮತ್ತು ವಾದ ಪ್ರತಿವಾದಗಳನ್ನು ನಡೆಸುತ್ತಾರೆ. ಇವು ವಿದ್ಯಾವಂತ ಜನರ ಅಭ್ಯಾಸವಾಗಿದೆ. ಅದು ನಮಗೆ ತೊಂದರೆಯೂ ಹೌದು" ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

“ಎರಡನೇ ವಿಶೇಷವೆಂದರೆ ರಾಜ್ಯದಲ್ಲಿ 55% ಹಿಂದೂಗಳು ಮತ್ತು 45% ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಆದ್ದರಿಂದ, ಈ ವ್ಯತ್ಯಾಸವು ಎಲ್ಲಾ ಲೆಕ್ಕಾಚಾರಗಳಲ್ಲಿಯೂ ಇರುತ್ತದೆ. ಅದಕ್ಕಾಗಿಯೇ ಕೇರಳವನ್ನು ಬೇರೆ ಯಾವುದೇ ರಾಜ್ಯದೊಂದಿಗೆ ಹೋಲಿಸಲಾಗುವುದಿಲ್ಲ. ಇಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ ಆದರೆ ನಾವು ನಿಧಾನವಾಗಿ ಮತ್ತು ಸ್ಥಿರವಾಗಿ ಬೆಳೆಯುತ್ತಿದ್ದೇವೆ ”ಎಂದು ರಾಜಗೋಪಾಲ್ ಹೇಳಿದರು.

ಕೇರಳದ ಏಕೈಕ ಬಿಜೆಪಿ ಶಾಸಕನ ಈ ಹೇಳಿಕೆಗಳಿಗೆ ಸಾಮಾಜಿಕ ತಾಣದಾದ್ಯಂತ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಈ ಕುರಿತಾದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್  "ನನ್ನ ಉತ್ತಮ ಸ್ನೇಹಿತ ಮತ್ತು ಹಿಂದಿನ ಎದುರಾಳಿ ಓ ರಾಜಗೋಪಾಲ್ ಈ ಸಂದರ್ಶನದಲ್ಲಿ ಬೆಕ್ಕನ್ನು ಚೀಲದಿಂದ ಹೊರಗೆ ಬಿಡುವುದನ್ನು ನೋಡಲು ಅದ್ಭುತವಾಗಿದೆ. ಕೇರಳಿಗರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ ಎಂದು ಅಧಿಕೃತ ಬಿಜೆಪಿ ಮೂಲವು ಒಪ್ಪಿಕೊಳ್ಳುತ್ತದೆ ಏಕೆಂದರೆ ಅವರು ವಿದ್ಯಾವಂತರು ಮತ್ತು ಯೋಚಿಸುತ್ತಾರೆ" ಎಂದು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News