ಪೆಟ್ರೋಲ್, ಡೀಸೆಲ್ ಅನ್ನು ಮುಂದಿನ 8-10 ವರ್ಷಗಳಿಗೆ ಜಿಎಸ್ಟಿ ವ್ಯಾಪ್ತಿಯಲ್ಲಿ ತರಲು ಅಸಾಧ್ಯ: ಸುಶೀಲ್ ಮೋದಿ
ಹೊಸದಿಲ್ಲಿ, ಮಾ. 24: ಎಲ್ಲಾ ರಾಜ್ಯಗಳಿಗೆ ವಾರ್ಷಿಕ 2 ಲಕ್ಷ ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಮುಂದಿನ 8ರಿಂದ 10 ವರ್ಷಗಳಿಗೆ ಜಿಎಸ್ಟಿ ವ್ಯಾಪ್ತಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಬುಧವಾರ ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಒಟ್ಟಾರೆಯಾಗಿ 5 ಲಕ್ಷ ಕೋಟಿ ರೂಪಾಯಿ ತೆರಿಗೆಯನ್ನು ಸಂಗ್ರಹಿಸುತ್ತವೆ ಎಂದು ಸುಶೀಲ್ ಕುಮಾರ್ ಮೋದಿ ಹಣಕಾಸು ಮಸೂದೆ 2021ರ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಸಂದರ್ಭ ಹೇಳಿದರು. ಈ ನಡುವೆ, ತೃಣಮೂಲ ಕಾಂಗ್ರೆಸ್ನ ಸಂಸದ ಡೆರಿಕ್ ಒಬ್ರಿಯಾನ್, ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ಗೆ ಹೆಚ್ಚು ಅಧಿಕಾರ ನೀಡುವಂತೆ ಕೋರುವ ಮಸೂದೆಯನ್ನು ನಿಲ್ಲಿಸಲು ಪಕ್ಷದ ಸಂಸದರು ದಿಲ್ಲಿಗೆ ಆಗಮಿಸಿದ್ದರು ಎಂದು ರಾಜ್ಯಸಭೆಗೆ ತಿಳಿಸಿದರು.
‘‘ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲು ಇನ್ನೆರೆಡು ದಿನಗಳು ಬಾಕಿ ಇವೆ. ಆದರೆ, ಚುನಾಯಿತ ದಿಲ್ಲಿ ಸರಕಾರಕ್ಕೆ ಅಧಿಕಾರ ನಿರಾಕರಿಸುವ ಜಿಎನ್ಸಿಟಿ ಮಸೂದೆಯನ್ನು ತಡೆಯಲು ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸಂಸದರು ದಿಲ್ಲಿಗೆ ತೆರಳಿದ್ದಾರೆ. ಈ ಮಸೂದೆ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸಂಸತ್ತಿನ ಹೃದಯಕ್ಕೆ ಹಾಕುವ ಇನ್ನೊಂದು ಚಾಕು’’ ಎಂದು ಅವರು ಟ್ವೀಟ್ ಮಾಡಿದ್ದಾರೆ.