ಸದ್ಯದ ಕೋವಿಡ್‌ ಪರಿಸ್ಥಿತಿಯು ಆರ್ಥಿಕ ಚೇತರಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ: ರಿಸರ್ವ್‌ ಬ್ಯಾಂಕ್‌ ಗವರ್ನರ್

Update: 2021-03-25 14:42 GMT

ಹೊಸದಿಲ್ಲಿ, ಮಾ.25: ಕೊರೋನವೈರಸ್ ಪ್ರಕರಣಗಳಲ್ಲಿ ಇತ್ತೀಚಿನ ಏರಿಕೆಯಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಯವುಂಟಾಗಬಾರದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಗುರುವಾರ ಇಲ್ಲಿ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು,ಆರ್ಥಿಕ ಚಟುವಟಿಕೆಗಳಲ್ಲಿ ಉಂಟಾಗಿರುವ ಚೇತರಿಕೆ ಅಬಾಧಿತವಾಗಿ ಮುಂದುವರಿಯಬೇಕು ಎಂದು ತಿಳಿಸಿದರು.

ಲಸಿಕೆ ನೀಡಿಕೆ ಅಭಿಯಾನವು ಪ್ರಗತಿಯಲ್ಲಿರುವುದರಿಂದ ಕಳೆದ ವರ್ಷ ಸಾಂಕ್ರಾಮಿಕ ಮೊದಲ ಅಲೆಯ ಸಂದರ್ಭದಲ್ಲಿ ಹೇರಲಾಗಿದ್ದ ಕಠಿಣ ಲಾಕ್‌ಡೌನ್ ಈಗ ಅಗತ್ಯವಾಗದಿರಬಹುದು. ಈ ಸಲ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಕೊಂಚ ಹೆಚ್ಚುವರಿ ರಕ್ಷಣೆಯನ್ನು ನಾವು ಹೊಂದಿದ್ದೇವೆ ಎಂದು ದಾಸ್ ಹೇಳಿದರಾದರೂ,ದೇಶದ ಹಲವು ಭಾಗಗಳಲ್ಲಿ ಕೊರೋನವೈರಸ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದು ಕಳವಳದ ವಿಷಯವಾಗಿದೆ ಎಂದರು.

2021-22ನೇ ಹಣಕಾಸು ಸಾಲಿನಲ್ಲಿ ಶೇ.10.5 ಬೆಳವಣಿಗೆಯ ಆರ್‌ಬಿಐ ಅಂದಾಜನ್ನು ಕೆಳಮುಖವಾಗಿ ಪರಿಷ್ಕರಿಸುವ ಅಗತ್ಯವಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಖಾಸಗೀಕರಣ ಕುರಿತು ಆರ್‌ಬಿಐ ಸರಕಾರದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ ಮತ್ತು ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದ ಹೂಡಿಕೆ ಹಿಂದೆಗೆತ ಯೋಜನೆಯಡಿ ಸಾರ್ವಜನಿಕ ಕ್ಷೇತ್ರದ ಎಲ್ಲ ಬ್ಯಾಂಕುಗಳನ್ನು ಖಾಸಗೀಕರಿಸುವುದಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚಿಗೆ ಬ್ಯಾಂಕ್ ಉದ್ಯೋಗಿಗಳಿಗೆ ಭರವಸೆ ನೀಡಿದ್ದರು. ಕ್ರಿಪ್ಟೊಕರೆನ್ಸಿಗಳ ಕುರಿತು ಆರ್‌ಬಿಐ ಆತಂಕವನ್ನು ಪುನರುಚ್ಚರಿಸಿದ ದಾಸ್,ಅದು ಈ ಬಗ್ಗೆ ಭಾರೀ ಕಳವಳಗಳನ್ನು ಸರಕಾರಕ್ಕೆ ವ್ಯಕ್ತಪಡಿಸಿದೆ. ಕ್ರಿಪ್ಟೊಕರೆನ್ಸಿಗಳ ಬಗ್ಗೆ ಆರ್‌ಬಿಐ ಮತ್ತು ಸರಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಮತ್ತು ಎರಡೂ ಹಣಕಾಸು ಸ್ಥಿರತೆಗೆ ಬದ್ಧವಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News