ಉಯಿಘರ್ ಮುಸ್ಲಿಮರ ಬೆಂಬಲಿಗರ ಮೇಲಿನ ಬೇಹುಗಾರಿಕೆ ಯತ್ನವನ್ನು ವಿಫಲಗೊಳಿಸಿದ್ದೇವೆ: ಫೇಸ್‌ಬುಕ್

Update: 2021-03-25 15:51 GMT

ಸಾನ್‌ಫ್ರಾನ್ಸಿಸ್ಕೊ (ಅವೆುರಿಕ), ಮಾ. 25: ಚೀನಾದಿಂದ ಹೊರಗೆ ಜೀವಿಸುತ್ತಿರುವ ಉಯಿಘರ್ ಮುಸ್ಲಿಮರ ಬೆಂಬಲಿಗರ ಮೇಲೆ ಬೇಹುಗಾರಿಕೆ ನಡೆಸುವ ಚೀನಾದ ಕನ್ನಗಾರರ ಪ್ರಯತ್ನಗಳನ್ನು ವಿಫಲಗೊಳಿಸಿರುವುದಾಗಿ ಫೇಸ್‌ಬುಕ್ ಬುಧವಾರ ಹೇಳಿದೆ.

ಚೀನಾದ ಸರ್ವಸಜ್ಜಿತ ಹ್ಯಾಕರ್‌ಗಳ ಗುಂಪೊಂದು ಹೊರ ದೇಶಗಳಲ್ಲಿ ವಾಸಿಸುತ್ತಿರುವ ನೂರಾರು ಉಯಿಘರ್ ಪರ ಹೋರಾಟಗಾರರು, ಪತ್ರಕರ್ತರು ಮತ್ತು ಭಿನ್ನಮತೀಯರನ್ನು ಗುರಿಯಾಗಿಸಿದೆ. ದುರುದ್ದೇಶದ ಕೋಡ್‌ಗಳನ್ನು ಹೊಂದಿರುವ ವೆಬ್‌ಸೈಟ್ ಲಿಂಕ್‌ಗಳಿಗೆ ಕ್ಲಿಕ್ ಮಾಡುವಂತೆ ಅವರನ್ನು ಉತ್ತೇಜಿಸಲಾಗುತ್ತಿದೆ ಎಂದು ಫೇಸ್‌ಬುಕ್ ತಿಳಿಸಿದೆ.

‘‘ತಮಗೆ ಬೇಕಾದವರನ್ನು ಗುರುತಿಸಲು ಹಾಗೂ ಅವರ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್‌ಗಳಲ್ಲಿ ದುರುದ್ದೇಶದ ಸಾಫ್ಟ್‌ವೇರ್‌ಗಳನ್ನು ಅಳವಡಿಸಲು ಈ ಗುಂಪು ವಿವಿಧ ಸೈಬರ್ ಬೇಹುಗಾರಿಕೆ ತಂತ್ರಗಳನ್ನು ಉಪಯೋಗಿಸುತ್ತಿದೆ. ಇದರಲ್ಲಿ ಯಶಸ್ವಿಯಾದ ಬಳಿಕ ಅವರ ಮೇಲೆ ಕಣ್ಗಾವಲು ಇಡಲಾಗುತ್ತದೆ’’ ಎಂದು ಫೇಸ್‌ಬುಕ್‌ನ ಸೈಬರ್ ಬೇಹುಗಾರಿಕೆ ತನಿಖೆಗಳ ಮುಖ್ಯಸ್ಥ ಮೈಕ್ ದಿಲ್‌ಯಾನ್‌ಸ್ಕಿ ಮತ್ತು ಭದ್ರತಾ ನೀತಿ ಮುಖ್ಯಸ್ಥ ನೆತಾನಿಯಲ್ ಗ್ಲೇಶರ್ ಬ್ಲಾಗ್‌ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.

‘‘ಈ ಗುಂಪು ಉತ್ತಮ ಸಂಪನ್ಮೂಲಗಳನ್ನು ಬಳಸಿಕೊಂಡು ಸುಸಜ್ಜತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ಆಸ್ಟ್ರೇಲಿಯ, ಕೆನಡ, ಕಝಖ್‌ಸ್ತಾನ್, ಸಿರಿಯ, ಟರ್ಕಿ, ಅಮೆರಿಕ ಮತ್ತು ಇತರ ದೇಶಗಳಲ್ಲಿ ವಾಸಿಸುತ್ತಿರುವ ಚೀನಾದ ಕ್ಸಿನ್‌ಜಿಯಾಂಗ್ ವಲಯದ ಉಯಿಘರ್ ಮುಸ್ಲಿಮರೇ ಅದರ ಪ್ರಧಾನ ಗುರಿಯಾಗಿದ್ದಾರೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News