ಮೀನು ಪದಾರ್ಥದಲ್ಲಿ ಥೇಲಿಯಂ ಬೆರೆಸಿ ಅತ್ತೆ, ನಾದಿನಿ ಹತ್ಯೆ
ಹೊಸದಿಲ್ಲಿ, ಮಾ. 25: ಮೀನು ಪದಾರ್ಥದಲ್ಲಿ ನಿಧಾನ ವಿಷ ಥೇಲಿಯಂ ಬೆರೆಸಿ ಪತ್ನಿ ಹಾಗೂ ಅವರ ಕುಟುಂಬಕ್ಕೆ ನೀಡಿ ಅತ್ತೆ, ನಾದಿನಿಯನ್ನು ಹತ್ಯೆಗೈದ ಆರೋಪದಲ್ಲಿ ದಿಲ್ಲಿಯ ವ್ಯಕ್ತಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ರಾಜಕೀಯ ವಿರೋಧಿಗಳನ್ನು ನಾಶ ಮಾಡಲು ನಿಧಾನ ವಿಷ ಥೇಲಿಯಂ ಬಳಕೆಯ ಬಗ್ಗೆ ತಿಳಿದಿದ್ದ ಸದ್ದಾಂ ಹುಸೈನ್‌ನಿಂದ ಪ್ರೇರಿತನಾಗಿ 37 ವರ್ಷದ ವರುಣ್ ಅರೋರಾ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ, ಮಾವ, ಅತ್ತೆ ಹಾಗೂ ನಾದಿನಿಗೆ ಬಡಿಸಿದ ಆಹಾರದಲ್ಲಿ ಥೇಲಿಯಂ ಬೆರೆಸಲಾಗಿತ್ತು ಎಂಬದು ಕೊಲೆಯ ಬಗ್ಗೆ ನಡೆದ ತನಿಖೆಯಲ್ಲಿ ಬೆಳಕಿಗೆ ಬಂದ ಬಳಿಕ ವರುಣ್ ಅರೋರಾನನ್ನು ದಕ್ಷಿಣ ದಿಲ್ಲಿಯ ಗ್ರೇಟರ್ ಕೈಲಾಸದಲ್ಲಿರುವ ಮನೆಯಿಂದ ಮಂಗಳವಾರ ಬಂಧಿಸಲಾಗಿದೆ.
ತನಗಾದ ಅವಮಾನದ ಪ್ರತೀಕಾರವಾಗಿ ವರುಣ್ ಅರೋರಾ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ವರುಣ್ ಅರೋರಾ ಜನವರಿಯಲ್ಲಿ ಈ ಕುಟುಂಬವನ್ನು ಭೇಟಿಯಾಗಿದ್ದ. ಆಗ ಮೀನಿನ ಪದಾರ್ಥ ತೆಗೆದುಕೊಂಡು ಹೋಗಿದ್ದ ಎಂಬುದು ಪತ್ತೆಯಾಗಿತ್ತು. ತೀವ್ರ ವಿಚಾರಣೆ ಬಳಿಕ ವರುಣ್ ಅರೋರ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.