ಬಾಂಗ್ಲಾದೇಶಕ್ಕೆ ಪ್ರಧಾನಿ ಮೋದಿ ಭೇಟಿ, ಶೇಕ್ ಹಸೀನಾ ಸ್ವಾಗತ
ಢಾಕಾ (ಬಾಂಗ್ಲಾದೇಶ), ಮಾ. 26: ಭಾರತ ಒಂದು ವರ್ಷದ ಹಿಂದೆ ಕೋವಿಡ್-19 ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ಲಾಕ್‌ಡೌನ್ ಘೋಷಿಸಿದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅವರು ಶುಕ್ರವಾರದಿಂದ ಎರಡು ದಿನಗಳ ಕಾಲ ಬಾಂಗ್ಲಾದೇಶ ಪ್ರವಾಸದಲ್ಲಿರುತ್ತಾರೆ.
ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಗೊಂಡ 50ನೇ ವರ್ಷಾಚರಣೆ ಮತ್ತು ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜೀಬುರ್ರಹ್ಮಾನ್ ರೆಹ್ಮಾನ್‌ರ ಜನ್ಮ ಶತಾಬ್ದಿ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದಾರೆ. ಶೇಖ್ ಮುಜೀಬುರ್ರಹ್ಮಾನ್ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರ ತಂದೆ.
ಉಭಯ ದೇಶಗಳು ತಮ್ಮ ನಡುವಿನ ರಾಜತಾಂತ್ರಿಕ ಬಾಂಧವ್ಯದ 50ನೇ ವರ್ಷವನ್ನೂ ಆಚರಿಸುತ್ತಿವೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಶುಕ್ರವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು. ಬಳಿಕ ಮೋದಿ ಸವರ್‌ನಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಬಳಿಕ ಮೋದಿ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹೋರಾಡಿದ ‘ಮುಕ್ತಿಜೋದ’ ಸೈನಿಕರನ್ನು ಭೇಟಿಯಾದರು.
ಬಾಂಗ್ಲಾದೇಶದ ಪ್ರತಿಪಕ್ಷ ನಾಯಕರನ್ನು ಭೇಟಿಯಾದ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ಚರ್ಚಿಸಿದರು.
ಬಾಂಗ್ಲಾ ಪತ್ರಿಕೆಯಲ್ಲಿ ಲೇಖನ ಬರೆದ ಮೋದಿ
ಬಾಂಗ್ಲಾದೇಶ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ಆ ದೇಶದ ಪ್ರಮುಖ ಪತ್ರಿಕೆ ‘ದ ಡೇಲಿ ಸ್ಟಾರ್’ನ ಶುಕ್ರವಾರದ ಸಂಚಿಕೆಯ ಸಂಪಾದಕೀಯ ಪುಟದಲ್ಲಿ ಲೇಖನವೊಂದನ್ನು ಬರೆದಿದ್ದಾರೆ.
ಬಾಂಗ್ಲಾದೇಶದ ಸ್ಥಾಪಕ ಬಂಗಬಂಧು ಶೇಖ್ ಮುಜೀಬುರ್ರಹ್ಮಾನ್ 1975ರಲ್ಲಿ ಹತ್ಯೆಗೀಡಾಗಿರದಿದ್ದರೆ, ಬಾಂಗ್ಲಾದೇಶ ಮತ್ತು ಈ ವಲಯವು ತೀರಾ ಭಿನ್ನ ಹಾದಿಯಲ್ಲಿ ಸಾಗುತ್ತಿತ್ತು ಎಂಬುದಾಗಿ ಅವರು ಬರೆದಿದ್ದಾರೆ.
ಶೇಖ್ ಮುಜೀಬುರ್ ರಹ್ಮಾನ್‌ಗೆ ಮರಣೋತ್ತರ ಗಾಂಧಿ ಶಾಂತಿ ಪ್ರಶಸ್ತಿ ಪ್ರದಾನ
ಭಾರತ ನೀಡುವ 2020ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಾಂಗ್ಲಾದೇಶದ ‘ರಾಷ್ಟ್ರಪಿತ’ ಶೇಖ್ ಮುಜೀಬುರ್ರಹ್ಮಾನ್‌ಗೆ ಮರಣೋತ್ತರವಾಗಿ ನೀಡಿದರು. ಅವರು ಪ್ರಶಸ್ತಿಯನ್ನು ಶೇಖ್ ಮುಜೀಬುರ್ ರಹ್ಮಾನ್‌ರ ಪುತ್ರಿ ಹಾಗೂ ಹಾಲಿ ಪ್ರಧಾನಿ ಶೇಖ್ ಹಸೀನಾರ ತಂಗಿ ಶೇಖ್ ರೆಹಾನಾರಿಗೆ ಹಸ್ತಾಂತರಿಸಿದರು.ಢಾಕಾದ ನ್ಯಾಶನಲ್ ಪರೇಡ್ ಚೌಕದಲ್ಲಿ ನಡೆದ ಬಾಂಗ್ಲಾದೇಶದ 50ನೇ ರಾಷ್ಟ್ರೀಯ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗಾಂಧಿ ಶಾಂತಿ ಪ್ರಶಸ್ತಿಯನ್ನು ಶೇಖ್ ಮುಜೀಬುರ್ರಹ್ಮಾನ್‌ಗೆ ನೀಡುತ್ತಿರುವುದು ಭಾರತದ ಪಾಲಿಗೆ ಗೌರವದ ಸಂಗತಿಯಾಗಿದೆ ಎಂದು ಹೇಳಿದರು.