×
Ad

ಭೀಮಾ ಕೋರೆಗಾಂವ್‌ ಪ್ರಕರಣ: ಗೌತಮ್‌ ನವಲಖಾ ಜಾಮೀನು ಅರ್ಜಿಯನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Update: 2021-03-26 16:20 IST

ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಗೌತಮ್ ನವಲಖಾ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ತನ್ನ ಆದೇಶವನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ನವಲಖಾ ಮತ್ತು ಎನ್‌ಐಎ ಪರ ಹಾಜರಾದ ವಕೀಲರ ​​ವಾದಗಳನ್ನು ಆಲಿಸಿದ ನಂತರ ಆದೇಶವನ್ನು ಕಾಯ್ದಿರಿಸಿದೆ ಎಂದು ತಿಳಿದು ಬಂದಿದೆ.

ಜಾಮೀನು ನೀಡಲು 90 ದಿನಗಳ ಕಸ್ಟಡಿ ಅವಧಿಯನ್ನು ಲೆಕ್ಕಾಚಾರ ಮಾಡುವಾಗ ಆರೋಪಿಯು ಅಕ್ರಮ ಬಂಧನದಲ್ಲಿದ್ದ ಅವಧಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಫೆಬ್ರವರಿ 8 ರಂದು ನವಲಖಾ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.

ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 167 (2) ರ ಪ್ರಕಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ಚಾರ್ಜ್‌ಶೀಟ್ ಅನ್ನು ನಿಗದಿತ ಮಿತಿಯ 90 ದಿನಗಳೊಳಗೆ ಸಲ್ಲಿಸಲು ವಿಫಲವಾಗಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ನವಲಖಾ ಜಾಮೀನು ಕೋರಿದ್ದಾರೆ.

ಗೃಹಬಂಧನದ ಸಂದರ್ಭ ತನ್ನ ಮನೆಯಲ್ಲಿದ್ದ ಅವಧಿಯನ್ನು ನ್ಯಾಯಾಂಗ ಬಂಧನದ ಭಾಗವಾಗಿ ಲೆಕ್ಕಹಾಕಬೇಕು ಮತ್ತು ಸೆಕ್ಷನ್ 167 (2) ರ ಅಡಿಯಲ್ಲಿ ಕಸ್ಟಡಿ ಅವಧಿಯನ್ನು ನಿರ್ಧರಿಸುವಾಗ ಅದನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದೇ ಆಧಾರದ ಮೇಲೆ ಅವರು ಹೈಕೋರ್ಟ್‌ನಿಂದ ಜಾಮೀನು ಕೋರಿದ್ದರು. ಕಳೆದ ವರ್ಷ, ವಿಶೇಷ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News