"ಗೋವಾ ರಾಜ್ಯವನ್ನು'ಮುಗಿಸಲು' ಬಿಜೆಪಿ ಸರಕಾರ ಅದಾನಿಯಿಂದ ಸುಪಾರಿ ಪಡೆದಿದೆ"

Update: 2021-03-26 11:15 GMT

ಪಣಜಿ: "ಭಾರತದ ಪಶ್ಚಿಮ ಕರಾವಳಿಯ ಗೋವಾ ರಾಜ್ಯವನ್ನು ʼಮುಗಿಸಲು'  ಬಿಜೆಪಿ ಸರಕಾರವು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರಿಂದ ʼಸುಪಾರಿʼ ಸ್ವೀಕರಿಸಿದೆ" ಎಂದು ಗೋವಾದ ಪ್ರಮೋದ್ ಸಾವಂತ್ ಸರಕಾರದ ವಿರುದ್ಧ ಗೋವಾ ಫಾರ್ವರ್ಡ್ ಪಾರ್ಟಿ ಅಧ್ಯಕ್ಷ ಹಾಗೂ ಫಟೋರ್ಡ ಶಾಸಕ ವಿಜಯ್ ಸರ್ದೇಸಾಯಿ ಕಿಡಿಕಾರಿದ್ದಾರೆ.

ರಾಜ್ಯ ವಿಧಾನಸಭೆಯ ಒಳಗೆ ಹಾಗೂ ಹೊರಗೆ ಅಲ್ಲಿನ ಬಿಜೆಪಿ ಸರಕಾರ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ ಎಂದು ಆರೋಪಿಸಿದ ಸರ್ದೇಸಾಯಿ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಅವರ ಸರಕಾರ ಕೇಂದ್ರ ಸರಕಾರದ ಕೈಗೊಂಬೆಗಳಾಗಿವೆ ಎಂದು ಟೀಕಿಸಿದ್ದಾರೆ.

"ನೀವು ಗೋವಾವನ್ನು ಮುಗಿಸಲು ಅದಾನಿಯಿಂದ ಸುಪಾರಿ ಪಡೆದುಕೊಂಡಿದ್ದೀರಿ. ನಿಮ್ಮ ದಿನಗಳು ಕೆಲವೇ ಬಾಕಿಯಿವೆ,  ನಿಮ್ಮಲ್ಲಿ ಹೆಚ್ಚಿನವರು ಇಲ್ಲಿ ಮುಂದಿನ ಬಾರಿ ಇರುವುದಿಲ್ಲ, ಇದು ನಿಮ್ಮ ಸರಕಾರದ ಕೊನೆಯ ಬಜೆಟ್" ಎಂದು ಸರ್ದೇಸಾಯಿ ಹೇಳಿದರು.

 ಖಾಸಗಿ ರಂಗದಲ್ಲಿ 80% ರಷ್ಟು ಉದ್ಯೋಗಗಳು ಸ್ಥಳೀಯರಿಗೆ ನೀಡುವ ಉದ್ದೇಶದ ಖಾಸಗಿ ಸದಸ್ಯರ ಮಸೂದೆಯನ್ನು ತಾವು ಮಂಡಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ ಸರ್ದೇಸಾಯಿ ಇಂತಹ ಮಸೂದೆಯನ್ನು ಹರ್ಯಾಣದ ಬಿಜೆಪಿ ಸರಕಾರ ಅನುಮೋದಿಸಿರುವಾಗ ಗೋವಾ ಸರಕಾರಕ್ಕೆ ಏಕೆ ಹಿಂಜರಿಕೆ ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಸರಕಾರದ ಬಹಳಷ್ಟು ಹಗರಣಗಳನ್ನು ಬಹಿರಂಗ ಪಡಿಸುವುದಾಗಿಯೂ ಅವರು ಹೇಳಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News