ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಕ್ಕಾಗಿ ನಾನು ಸತ್ಯಾಗ್ರಹ ನಡೆಸಿ ಜೈಲಿಗೆ ಹೋಗಿದ್ದೆ: ಪ್ರಧಾನಿ ಮೋದಿ

Update: 2021-03-26 16:50 GMT

) ಢಾಕಾ,ಮಾ.26: ಶುಕ್ರವಾರ ಬಾಂಗ್ಲಾದೇಶಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು 50ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಆ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಬಾಂಗ್ಲಾದೇಶದ ಸ್ವಾತಂತ್ರಕ್ಕಾಗಿ ಪ್ರತಿಭಟನೆ ನಡೆಸಿದ್ದು ತನ್ನ ರಾಜಕೀಯ ಜೀವನದ ಮೊದಲ ಪ್ರತಿಭಟನೆಗಳಲ್ಲಿ ಒಂದಾಗಿತ್ತು ಮತ್ತು ಅದಕ್ಕಾಗಿ ತಾನು ಜೈಲಿಗೂ ಹೋಗಿದ್ದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

‘ಬಾಂಗ್ಲಾದೇಶದ ಸ್ವಾತಂತ್ರ ಹೋರಾಟವು ನನ್ನ ಬದುಕಿನ ಪಯಣದಲ್ಲಿಯೂ ಮಹತ್ವದ ಘಳಿಗೆಯಾಗಿತ್ತು. ಭಾರತದಲ್ಲಿ ನಾನು ಮತ್ತು ನನ್ನ ಸಹೋದ್ಯೋಗಿಗಳು ಸತ್ಯಾಗ್ರಹವನ್ನು ನಡೆಸಿದ್ದೆವು. ನಾನಾಗ 20ರ ಹರೆಯದಲ್ಲಿದ್ದೆ. ಇದಕ್ಕಾಗಿ ನಾನು ಜೈಲಿಗೂ ಹೋಗಿದ್ದೆ ’ ಎಂದರು.

‘ಈ ಮಹಾನ್ ದೇಶದ ಸೈನಿಕರು ಮತ್ತು ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದ ಭಾರತೀಯರು ಮಾಡಿದ ತ್ಯಾಗವನ್ನು ನಾವೆಂದೂ ಮರೆಯುವುದಿಲ್ಲ. ಅವರ ಶೌರ್ಯ ಮತ್ತು ಧೈರ್ಯವನ್ನು ನಾವೆಂದಿಗೂ ಮರೆತಿಲ್ಲ,ಮರೆಯುವುದೂ ಇಲ್ಲ ’ಎಂದು ಇಲ್ಲಿಯ ರಾಷ್ಟ್ರೀಯ ಪರೇಡ್ ಮೈದಾನದಲ್ಲಿ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೋದಿ ಹೇಳಿದರು.

ಇದು ತನ್ನ ಜೀವನದ ಅತ್ಯಂತ ಸ್ಮರಣೀಯ ದಿನಗಳಲ್ಲೊಂದಾಗಿದೆ .ಈ ಕಾರ್ಯಕ್ರಮದಲ್ಲಿ ತನ್ನನ್ನು ಭಾಗಿಯಾಗಿಸಿದ್ದಕ್ಕಾಗಿ ತಾನು ಬಾಂಗ್ಲಾದೇಶಕ್ಕೆ ಆಭಾರಿಯಾಗಿದ್ದೇನೆ ಎಂದರು.

 ಇದಕ್ಕೂ ಮುನ್ನ ಮೋದಿ ಮತ್ತು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ಅವರು ಪರಸ್ಪರ ಮಾತುಕತೆಗಳನ್ನು ನಡೆಸಿದರು.

 ಬಾಂಗ್ಲಾದೇಶದಲ್ಲಿಯ ಅಲ್ಪಸಂಖ್ಯಾತರ ಪ್ರತಿನಿಧಿಗಳು, ಮುಕ್ತಿಯೋಧರು ಅಥವಾ ಸ್ವಾತಂತ್ರ ಹೋರಾಟಗಾರರು, ಭಾರತದ ಮಿತ್ರರು ಮತ್ತು ಯುವ ನಾಯಕರು ಸೇರಿದಂತೆ ಹಲವಾರು ಸಮುದಾಯ ನಾಯಕರನ್ನು ಮೋದಿ ಭೇಟಿಯಾದರು.

ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲು ಪಶ್ಚಿಮ ಬಂಗಾಳದ ಇಬ್ಬರು ಖ್ಯಾತ ಕಲಾವಿದರನ್ನೂ ಆಹ್ವಾನಿಸಲಾಗಿತ್ತು.

ಬಾಂಗ್ಲಾದೇಶವು ರಾಷ್ಟ್ರಪಿತ ಬಂಗಬಂಧು ಶೇಖ ಮುಜೀಬರ್ ರೆಹಮಾನ್ ಅವರ ಜನ್ಮಶತಾಬ್ದಿಯನ್ನೂ ಆಚರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News