ಮಹಾರಾಷ್ಟ್ರ: ಗುಂಡು ಹಾರಿಸಿಕೊಂಡು ಮಹಿಳಾ ಅರಣ್ಯಾಧಿಕಾರಿ ಆತ್ಮಹತ್ಯೆ

Update: 2021-03-26 14:18 GMT
photo: twitter

ಅಮರಾವತಿ,ಮಾ.26: ವಲಯ ಅರಣ್ಯಾಧಿಕಾರಿ ದೀಪಾಲಿ ಚವಾಣ್ (34) ಎನ್ನುವವರು ಗುರುವಾರ ಅಮರಾವತಿ ಜಿಲ್ಲೆಯ ಹರಿಸಾಲ್ ಗ್ರಾಮದ ತನ್ನ ನಿವಾಸದಲ್ಲಿ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಮೇಳಘಾಟ್ ಟೈಗರ್ ರಿಸರ್ವ್ (ಎಂಟಿಆರ್)ನ ಗೂಗಾಮಲ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೋದ್ ಶಿವಕುಮಾರ ಎಂಬಾತನನ್ನು ಪೊಲೀಸರು ಶುಕ್ರವಾರ ನಸುಕಿನಲ್ಲಿ ನಾಗ್ಪುರ ರೈಲ್ವೆ ನಿಲ್ದಾಣದಿಂದ ಬಂಧಿಸಿದ್ದಾರೆ.

ಚವಾಣ್ ಕುಟುಂಬದ ದೂರಿನ ಮೇರೆಗೆ ಶಿವಕುಮಾರರನ್ನು ಬಂಧಿಸಲಾಗಿದೆ ಎಂದು ಅಮರಾವತಿ ಎಸ್‌ಪಿ ಡಾ.ಹರಿ ಬಾಲಾಜಿ ಎನ್.ಅವರು ತಿಳಿಸಿದರು.

ಅಮರಾವತಿ ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಹೊರಗೆ ಪ್ರತಿಭಟನೆ ನಡೆಸಿದ್ದ ಮೃತ ಚವಾಣ್ ಅವರ ಬಂಧುಗಳು ಮತ್ತು ಹಿತೈಷಿಗಳು ಎಂಟಿಆರ್ ಯೋಜನಾ ನಿರ್ದೇಶಕ ಎನ್.ಶ್ರೀನಿವಾಸ ರೆಡ್ಡಿಯನ್ನು ಬಂಧಿಸುವವರೆಗೆ ಶವವನ್ನು ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

ಆರೋಪಿ ಶಿವಕುಮಾರ ಚವಾಣ್‌ಗೆ ಹಿಂಸೆ,ಕಿರುಕುಳ ನೀಡಿದ್ದ,ಅವಮಾನಿಸಿದ್ದ ಮತ್ತು ನಿಂದಿಸಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಶಿವಕುಮಾರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ್ಮಹತ್ಯಾ ಚೀಟಿಯಲ್ಲಿ ಬರೆದಿರುವ ಚವಾಣ್,ತಾನು ಈ ಬಗ್ಗೆ ಪದೇ ಪದೇ ದೂರುಗಳನ್ನು ಸಲ್ಲಿಸಿದ್ದರೂ ಶ್ರೀನಿವಾಸ ಕಡೆಗಣಿಸಿದ್ದ ಎಂದೂ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News