×
Ad

ಏರ್‌ ಇಂಡಿಯಾ ಮಾರಾಟಕ್ಕೆ ಬಿಡ್‌ ಆಹ್ವಾನಿಸಲಾಗುವುದು: ವಿಮಾನಯಾನ ಸಚಿವರ ಹೇಳಿಕೆ

Update: 2021-03-26 20:10 IST

ಹೊಸದಿಲ್ಲಿ: ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಉದ್ದೇಶದಿಂದ  ಬಿಡ್‍ಗಳನ್ನು ಮುಂದಿನ ದಿನಗಳಲ್ಲಿ ಆಹ್ವಾನಿಸಲಾಗುವುದು ಎಂದು ಕೇಂದ್ರನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು ಹೇಳಿದ್ದಾರೆ.

"ನಾವು ಈಗ ಇನ್ನೊಂದು ಸಮಯ ಮಿತಿ ನಿಗದಿ ಪಡಿಸುತ್ತಿದ್ದೇವೆ. ಹಣಕಾಸು ಬಿಡ್ ಸಲ್ಲಿಕೆಗೆ 64 ದಿನಗಳು ದೊರೆಯಲಿವೆ. ಈ ಅವಧಿ ಮುಗಿದ ನಂತರ ಒಂದು ನಿರ್ಧಾರ ಕೈಗೊಂಡು ವಿಮಾನಯಾನ ಸಂಸ್ಥೆಯನ್ನು ಹಸ್ತಾಂತರಿಸುವುದಾಗಿದೆ" ಎಂದು ಸಚಿವರು ಹೇಳಿದರು.

ಏರ್ ಇಂಡಿಯಾ ಖಾಸಗೀಕರಣ ಹಾಗೂ ಅದನ್ನು ನೂತನ ಮಾಲಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಈ ವರ್ಷಾಂತ್ಯಕ್ಕೆ ಪೂರ್ಣಗೊಳಿಸುವ ಉದ್ದೇಶ ಸರಕಾರಕ್ಕಿದೆ. ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ಕೋವಿಡ್ ಸಾಂಕ್ರಾಮಿಕದಿಂದ ವಿಳಂಬಗೊಂಡಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವುದನ್ನು ಬಿಟ್ಟು ಸರಕಾರಕ್ಕೆ ಅನ್ಯ ಮಾರ್ಗವಿಲ್ಲ, ಈ ಆಯ್ಕೆಯಲ್ಲದೇ ಹೋದರೆ ಇರುವ ಏಕೈಕ ಆಯ್ಕೆಯೆಂದರೆ ವಿಮಾನಯಾನ ಸಂಸ್ಥೆಯನ್ನೇ ಮುಚ್ಚುವುದಾಗಿದೆ ಎಂದು ಅವರು ಇಂಡಿಯಾ ಇಕನಾಮಿಕ್ ಕಾಂಕ್ಲೇವ್‍ನಲ್ಲಿ ಮಾತನಾಡುತ್ತಾ ಹೇಳಿದರು.

"ಸರಿಯಾದ ನಿರ್ವಹಣೆಯಿಲ್ಲದೆ ಸಂಸ್ಥೆಯ ಒಟ್ಟು ಸಾಲದ ಹೊರೆ ರೂ 60,000 ಕೋಟಿ ತಲುಪಿದೆ. ಹಲವಾರು ಕ್ರಮಗಳ ಮುಖಾಂತರ ನಿರ್ವಹಣಾ ವೆಚ್ಚಗಳನ್ನು ವಾರ್ಷಿಕ ರೂ 1,500 ಕೋಟಿಯಷ್ಟು ಕಡಿಮೆಗೊಳಿಸಲಾಗಿದ್ದರೂ ದಿನಂಪ್ರತಿ ಸಂಸ್ಥೆ ರೂ. 20 ಕೋಟಿ ನಷ್ಟ ಅನುಭವಿಸುತ್ತಿದೆ. ಹೊಸ ಮಾಲಕರಿಗೆ ಹಸ್ತಾಂತರಿಸುವ ತನಕ ಈ ಸಂಸ್ಥೆಯನ್ನು ನಾವು ನಡೆಸುತ್ತೇವೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News