ಇಸ್ರೇಲ್‌ನಲ್ಲಿ ‘ಕಿಂಗ್‌ಮೇಕರ್’ ಆಗಿ ಹೊರಹೊಮ್ಮಿದ ಅರಬ್ ಪಕ್ಷ

Update: 2021-03-26 15:34 GMT
photo: wikipedia

ಟೆಲ್ ಅವೀವ್ (ಇಸ್ರೇಲ್), ಮಾ. 26: ಇಸ್ರೇಲ್‌ನಲ್ಲಿ ಮೊದಲ ಬಾರಿಗೆ ಅರಬ್ ರಾಜಕೀಯ ಪಕ್ಷವೊಂದು ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ‘ಕಿಂಗ್‌ಮೇಕರ್’ ಆಗಿ ಹೊರಹೊಮ್ಮಿದೆ. ದೇಶದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಇತ್ತೀಚೆಗೆ ನಾಲ್ಕನೇ ಚುನಾವಣೆ ನಡೆದರೂ ಯಾವುದೇ ಬಣವು ಸ್ಪಷ್ಟ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿದೆ.

ಮಂಗಳವಾರ ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಎಣಿಕೆ ಮುಗಿದಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಬಲಪಂಥೀಯ ಲಿಕುಡ್ ಪಕ್ಷ ಮತ್ತು ಅದರ ಮಿತ್ರಪಕ್ಷಗಳು 120 ಸದಸ್ಯ ಬಲದ ಸಂಸತ್ ‘ನೆಸೆಟ್’ನಲ್ಲಿ 52 ಸ್ಥಾನಗಳನ್ನು ಗೆದ್ದಿವೆ ಎಂದು ಇಸ್ರೇಲ್‌ನ ಚುನಾವಣಾ ಆಯೋಗ ಗುರುವಾರ ಘೋಷಿಸಿದೆ.

ಭಿನ್ನ ಸಿದ್ಧಾಂತದ ಪ್ರತಿಪಕ್ಷಗಳ ಒಕ್ಕೂಟವು 57 ಸ್ಥಾನಗಳನ್ನು ಗೆದ್ದಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಮಾಜಿ ಮಿತ್ರರೊಬ್ಬರ ನೇತೃತ್ವದ ಬಲಪಂಥೀಯ ಪಕ್ಷವೊಂದು 7 ಸ್ಥಾನಗಳನ್ನು ಪಡೆದಿದೆ. ಮನ್ಸೂರ್ ಅಬ್ಬಾಸ್ ನೇತೃತ್ವದ ಅರಬ್ ಪಕ್ಷ ರಆಮ್ 4 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ನೆತನ್ಯಾಹು ಬಣವಾಗಲಿ ಅವರ ಎದುರಾಳಿ ಬಣವಾಗಲಿ ಸರಕಾರ ರಚಿಸಲು ಅಗತ್ಯವಾದ ಸರಳ ಬಹುಮತವನ್ನು ಪಡೆದಿಲ್ಲ. ಸರಳ ಬಹುಮತಕ್ಕೆ 61 ಸ್ಥಾನಗಳ ಅಗತ್ಯವಿದೆ. ಹಾಗಾಗಿ, ಯಾವುದೇ ಬಣ ಸರಕಾರ ಸ್ಥಾಪಿಸಬೇಕಾದರೂ ‘ರಆಮ್’ ಪಕ್ಷದ ಬೆಂಬಲ ಅಗತ್ಯವಾಗಿದೆ.

ಆದರೆ, ಎರಡೂ ಪ್ರಧಾನ ರಾಜಕೀಯ ಬಣಗಳಲ್ಲಿರುವ ಬಲಪಂಥೀಯ ರಾಜಕಾರಣಿಗಳು ಅರಬ್ ಪಕ್ಷದ ಬೆಂಬಲ ತೆಗೆದುಕೊಂಡು ಸರಕಾರ ರಚಿಸುವುದನ್ನು ವಿರೋಧಿಸುತ್ತಿದ್ದಾರೆ. ರಆಮ್ ಪಕ್ಷವು ಯಹೂದಿ ವಿರೋಧಿ ಧೋರಣೆಯನ್ನು ಹೊಂದಿರುವುದರಿಂದ ಅದರೊಂದಿಗೆ ಮೈತ್ರಿ ಏರ್ಪಡಿಸುವುದು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈವರೆಗೆ ಅರಬ್ ಪಕ್ಷವೊಂದು ಇಸ್ರೇಲ್ ಸರಕಾರದ ಭಾಗವಾಗಿಲ್ಲ.

ಮುಂದಿನ ಸರಕಾರ ರಚಿಸಲು ರಆಮ್ ಪಕ್ಷದ ಬೆಂಬಲ ತೆಗೆದುಕೊಳ್ಳುವುದೇ ಬೇಡವೇ ಎಂಬ ಸಂಧಿಗ್ಧತೆಯಲ್ಲಿ ನೆತನ್ಯಾಹು ಬಣ ಮತ್ತು ಅದರ ವಿರೋಧಿ ಬಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News