ತಮಿಳುನಾಡು ಸಿಎಂ ಪಳನಿಸ್ವಾಮಿ ಅವರನ್ನು ‘ಸ್ಟಾಲಿನ್ ಚಪ್ಪಲಿ’ ಗೆ ಹೋಲಿಸಿದ ಡಿಎಂಕೆ ನಾಯಕ
ಚೆನ್ನೈ: ಇಪಿಎಸ್ ಎಂದು ಜನಪ್ರಿಯವಾಗಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ಮೌಲ್ಯ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಚಪ್ಪಲಿಗಿಂತ ಕಡಿಮೆ ಎಂದು ಹೇಳಿರುವ ಮಾಜಿ ಕೇಂದ್ರ ಸಚಿವ ಎ.ರಾಜಾ ವಿವಾದವನ್ನು ಹುಟ್ಟುಹಾಕಿದ್ದಾರೆ.
ವೆಲ್ಲಮಂಡಿ(ಬೆಲ್ಲದ ಮಾರುಕಟ್ಟೆ)ಯಲ್ಲಿ ಕೆಲಸ ಮಾಡಿರುವ ಎಡಪ್ಪಾಡಿ ಪಳನಿಸ್ವಾಮಿ ಅವರು ಸ್ಟಾಲಿನ್‍ಗೆ ಸ್ಪರ್ಧೆಯೊಡ್ಡಬಲ್ಲರೇ? ಸ್ಟಾಲಿನ್ ಅವರ ಚಪ್ಪಲಿಯ ಮೌಲ್ಯವು ಪಳನಿಸ್ವಾಮಿಗಿಂತ ಒಂದು ರೂಪಾಯಿ ಜಾಸ್ತಿಯೇ ಇದೆ. ಸ್ಟಾಲಿನ್ ಗೆ ಸವಾಲು ಹಾಕುವ ಧೈರ್ಯ ಅವರಿಗಿದೆಯೇ ಎಂದು ಚುನಾವಣಾ ಸಭೆಯೊಂದರಲ್ಲಿ ರಾಜಾ ಹೇಳಿದ್ದರು.
ನೆಹರೂ, ಇಂದಿರಾಗಾಂಧಿ ಹಾಗೂ ಮೋದಿಗೆ ಇರದ ಧೈರ್ಯವನ್ನು ಎಡಪ್ಪಾಡಿ ತೋರಿಸುತ್ತಿದ್ದಾರೆ. ಏಕೆಂದರೆ ಅವರು ಲೂಟಿ ಹೊಡೆದ ಹಣದ ಮೇಲೆ ನಂಬಿಕೆ ಇಟ್ಟಿದ್ದಾರೆ. ಪಕ್ಷವು ತನ್ನನ್ನು ಉಳಿಸುತ್ತದೆ ಎಂದು ನಂಬಿದ್ದಾರೆ. ಸ್ಟಾಲಿನ್ ಅವರನ್ನು ತಡೆಯುತ್ತೇನೆ ಎಂದು ಅವರು ಹೇಳುತ್ತಾರೆ. ಅವರು ಒಂದು ದಿನ ಹಾಗೆ ಮಾಡಿದರೆ ಅವರ ಕಾರು ಅವರ ಮನೆಯಿಂದ ಕಚೇರಿಗೆ ಹೋಗುವುದಿಲ್ಲ ಎಂದು ವಿನಮ್ರದಿಂದ ಹೇಳುವೆ ಎಂದು ರಾಜಾ ಹೇಳಿದ್ದಾರೆ.
ರಾಜಾ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಪಳನಿಸ್ವಾಮಿ, ತಾನು ಕೃಷಿಕ, ಬಡ ಕುಟುಂಬದಿಂದ ಬಂದವನು. ಆದ್ದರಿಂದ ವಿನಮ್ರನಾಗಿರುತ್ತೇನೆ. ಸ್ಟಾಲಿನ್ ತಂದೆ ಮುಖ್ಯಮಂತ್ರಿಯಾಗಿದ್ದರಿಂದ ಅವರು ಬೆಳ್ಳಿ ಚಮಚ ಬಾಯಲ್ಲಿಟ್ಟುಕೊಂಡು ಜನಿಸಿದವರು. ಹಗರಣವನ್ನು ಮಾಡಿದ ಏಕೈಕ ಪಕ್ಷ ಡಿಎಂಕೆ. ಅವರು(ರಾಜಾ)ಬಳಸಿದ ಭಾಷೆ ಯಾವುದು ನೋಡಿ. ನನ್ನ ಮೌಲ್ಯವು ಸ್ಟಾಲಿನ್ ಧರಿಸಿರುವ ಚಪ್ಪಲಿಗಿಂತ ಒಂದು ರೂಪಾಯಿ ಕಡಿಮೆಯಂತೆ. ಮುಖ್ಯಮಂತ್ರಿಯನ್ನು ಚಪ್ಪಲಿಗೆ ಹೋಲಿಸಿದ್ದು ಸರಿಯೇ? ನಾನು ಯಾರೆಂದು ಎಲ್ಲರಿಗೂ ಗೊತ್ತಿದೆ. ನಾನು ಕೃಷಿಕ. ನಾವು ಬಡವರು. ನಾವು ಕಷ್ಟಪಟ್ಟು ದುಡಿಯುತ್ತೇವೆ. ನಾವು ನಿಭಾಯಿಸಬಹುದಾದ್ದನ್ನು ಮಾತ್ರ ಖರೀಸುತ್ತೇವೆ. ಆದರೆ ಅವರು ಹಾಗಲ್ಲ. ಅವರು 1.76 ಲಕ್ಷ ಕೋಟಿ ಭ್ರಷ್ಟಾಚಾರ ಹಗರಣ ಹಿಂದಿದ್ದವರು. ಅವರು ಏನು ಬೇಕಾದರೂ ಖರೀದಿಸಬಹುದು ಎಂದು ಇಪಿಎಸ್ ತಿಳಿಸಿದರು.