"ಐದು ನಿಮಿಷಗಳ ಅವಧಿಯಲ್ಲಿ ಮತದಾನ ಪ್ರಮಾಣ ಅರ್ಧದಷ್ಟು ಕಡಿಮೆ"

Update: 2021-03-27 09:36 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಚುನಾವಣೆ ಆರಂಭಗೊಂಡ ಬೆನ್ನಲ್ಲೇ ಮತದಾನ ಪ್ರಮಾಣದಲ್ಲಿ "ಅಸಮರ್ಪಕತೆ'' ಹಾಗೂ ಇವಿಎಂ ದೋಷಗಳ ಕುರಿತಂತೆ ತೃಣಮೂಲ ಕಾಂಗ್ರೆಸ್ ಪಕ್ಷ ಆರೋಪಗಳನ್ನು ಹೊರಿಸಿದೆ.

ಪಕ್ಷದ ಸಂಸದ ಡೆರೆಕ್ ಒ'ಬ್ರಿಯಾನ್ ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರಲ್ಲದೆ ಪಕ್ಷದ ನಿಯೋಗವೊಂದು ಇಂದು ಅಪರಾಹ್ನ ಚುನಾವಣಾ ಆಯುಕ್ತರನ್ನು ಭೇಟಿಯಾಗಿದೆ.

ಪೂರ್ವ ಮೆದಿನಿಪುರ್ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಸಂಖ್ಯೆಗಳನ್ನು ಟ್ವೀಟ್ ಒಂದರಲ್ಲಿ ಶೇರ್ ಮಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಏನು ನಡೆಯುತ್ತಿದೆ? ಮತದಾನ  ಪ್ರಮಾಣ ಕೇವಲ 5 ನಿಮಿಷಗಳ ಅವಧಿಯಲ್ಲಿ ಅರ್ಧದಷ್ಟು ಹೇಗೆ ಕಡಿಮೆಯಾಯಿತೆಂದು ನೀವು ವಿವರಿಸುತ್ತೀರಾ? ಆಘಾತಕಾರಿ, ಇದರ ಬಗ್ಗೆ ತುರ್ತಾಗಿ ಗಮನ ಹರಿಸಿ,'' ಎಂದು ಟ್ವೀಟ್ ಮಾಡಿದ್ದಾರೆ.

ಜನರಿಗೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಸಾಧ್ಯವಾಗುತ್ತಿಲ್ಲವೆಂಬ ಆರೋಪಗಳ ಕುರಿತೂ ಟಿಎಂಸಿ ಇನ್ನೊಂದು ಟ್ವೀಟ್‍ನಲ್ಲಿ ಬರೆದಿದೆ.

"ಮತದಾರರಿಂದ ಆಘಾತಕಾರಿ ಹೇಳಿಕೆಗಳು, ಚುನಾವಣಾ ಆಯೋಗ ಇತ್ತ ಗಮನ ನೀಡಬೇಕು. ಕಾಂತಿ ದಕ್ಷಿಣ್ ವಿಧಾನಸಭಾ ಕ್ಷೇತ್ರದಲ್ಲಿ ತಾವು ಟಿಎಂಸಿಗೆ ಮತ ಹಾಕಿದ್ದರೂ ವಿವಿಪ್ಯಾಟ್ ಬಿಜೆಪಿ ಚಿಹ್ನೆ ತೋರಿಸಿದೆ ಎಂದು ಹಲವು ಮತದಾರರು ಆರೋಪಿಸಿದ್ದಾರೆ. ಇದು ಗಂಭೀರ, ಇದು ಕ್ಷಮಾರ್ಹವಲ್ಲ,'' ಎಂದು ಟಿಎಂಸಿ ಟ್ವೀಟ್ ಮಾಡಿದೆ.

ರಾಜ್ಯದ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿಯಾದ ತೃಣಮೂಲ ನಾಯಕ ಸುದೀಪ್ ಬಂದ್ಯೋಪಾಧ್ಯಾಯ ನಂತರ ಸುದ್ದಿಗಾರರ ಜತೆ ಮಾತನಾಡಿ  ತಮ್ಮ ಪಕ್ಷದ  ಕಳವಳವನ್ನು ಆಯುಕ್ತರ ಜತೆ ಹಂಚಿಕೊಂಡಿದ್ದಾಗಿ ತಿಳಿಸಿದರು. ಬೂತ್ ಏಜಂಟ್ ಆಗಿರುವವರು ಅದೇ ಬೂತ್‍ನ ಮತದಾರರಾಗಿರಬೇಕೆಂಬ ನಿಯಮವನ್ನು ಬದಲಾಯಿಸಿ ಯಾರು ಕೂಡ ಯಾವ ಬೂತ್‍ನಲ್ಲಿಯೂ ಏಜಂಟ್ ಆಗಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದನ್ನು ಉಲ್ಲೇಖಿಸಿದ ಅವರು, "ಈ ಹೊಸ ವ್ಯವಸ್ಥೆ ನಮಗೆ ಸ್ವೀಕಾರಾರ್ಹವಲ್ಲ, ಮುಂದಿನ ಹಂತದ ಚುನಾವಣೆಯಲ್ಲಿ ಬೂತ್ ಏಜಂಟ್ ಆ ಬೂತ್‍ನವರೇ ಆಗಿರಬೇಕೆಂದು ನಮ್ಮ ಮನವಿ. ಇದನ್ನು ಪರಿಗಣಿಸುವುದಾಗಿ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ,'' ಎಂದು  ಸುದೀಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News