ಕರ್ತವ್ಯ ನಿರ್ವಹಿಸಿ ವಾಪಸಾಗುತ್ತಿದ್ದ ಅಗ್ನಿಶಾಮಕದಳದ ಹಿರಿಯ ಅಧಿಕಾರಿ ರಸ್ತೆ ಅಪಘಾತಕ್ಕೆ ಬಲಿ
ಪುಣೆ: ಪುಣೆ ಕ್ಯಾಂಪ್ ನ ಫ್ಯಾಶನ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ಮರಳುತ್ತಿದ್ದ ಪುಣೆ ಕ್ಯಾಂಟನ್ ಮೆಂಟ್ ಬೋರ್ಡ್(ಪಿಸಿಬಿ)ಅಗ್ನಿ ಶಾಮಕ ದಳದ ಅಧೀಕ್ಷಕ ಪ್ರಕಾಶ್ ಹಸ್ಬೆ ಶನಿವಾರ ಮುಂಜಾನೆ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಅಗ್ನಿ ಅನಾಹುತ ಘಟನೆಯಲ್ಲಿ ಕರ್ತವ್ಯ ನಿರ್ವಹಿಸಿ ವಾಪಸಾಗುತ್ತಿದ್ದಾಗ ಹಸ್ಬೆ ರಸ್ತೆ ಅಫಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪಿಸಿಬಿ ಸಿಇಒ ಅಮಿತ್ ಕುಮಾರ್ ದೃಢಪಡಿಸಿದರು.
ಅಗ್ನಿ ಅನಾಹುತ ಸ್ಥಳಕ್ಕೆ ಭೇಟಿ ನೀಡಿದ್ದ ಹಸ್ಬೆ ಬೆಳಗ್ಗೆ 4:30ರ ಸುಮಾರಿಗೆ ಸ್ಥಳದಿಂದ ಹೊರಟಿದ್ದರು. ಒಂದೆರಡು ಗಂಟೆಗಳಲ್ಲಿ ಮರಳಿ ಬರುವುದಾಗಿ ತನ್ನ ಅಧೀನ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಅವರು ಮನೆಗೆ ಹೋಗುವಾಗ ಪುಣೆ ಅಹ್ಮದ್ ನಗರ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಶುಕ್ರವಾರ ರಾತ್ರಿ 11 ಗಂಟೆಗೆ ಪುಣೆಯ ಫ್ಯಾಶನ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ ಸುಮಾರು 400 ಮಳಿಗೆಗಳು ಸುಟ್ಟುಕರಕಲಾಗಿದ್ದವು. ಕೇಂದ್ರ ಅಗ್ನಿ ಶಾಮಕ ದಳ ಹಾಗೂ ಪಿಸಿಬಿ ಕಠಿಣ ಪ್ರಯತ್ನದ ಫಲವಾಗಿ ಮುಂಜಾನೆ 1:30ರ ಸುಮಾರಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿತ್ತು. ಇಡೀ ಅಗ್ನಿಶಾಮಕ ಕಾರ್ಯಾಚರಣೆಯನ್ನು ಮೇಲ್ಚಿಚಾರಣೆ ನಡೆಸಿದ ಹಿರಿಯ ಅಗ್ನಿಶಾಮಕ ಅಧಿಕಾರಿಗಳಲ್ಲಿ ಹಸ್ಬೆ ಕೂಡ ಒಬ್ಬರು.