×
Ad

ಸರಕಾರದ ಮುಂದೆ ಎರಡೇ ಆಯ್ಕೆಗಳು-ಏರ್ ಇಂಡಿಯಾ ಖಾಸಗೀಕರಣ ಅಥವಾ ಮುಚ್ಚುಗಡೆ

Update: 2021-03-27 16:57 IST

ಹೊಸದಿಲ್ಲಿ: ಏರ್ ಇಂಡಿಯಾವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲಾಗುವುದು. ಸರಕಾರದ ಮುಂದೆ ಅದನ್ನು ಖಾಸಗೀಕರಣಗೊಳಿಸುವುದು ಅಥವಾ ಮುಚ್ಚುವುದು-ಹೀಗೆ ಎರಡೇ ಆಯ್ಕೆಗಳಿವೆ, ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

“ನಾವು ಏರ್ ಇಂಡಿಯಾವನ್ನು ಶೇ100ರಷ್ಟು ಖಾಸಗೀಕರಣಗೊಳಿಸುತ್ತೇವೆ. ಇಲ್ಲಿ ಖಾಸಗೀಕರಣಗೊಳಿಸುವುದು ಅಥವಾ ಖಾಸಗೀಕರಣಗೊಳಿಸದೇ ಇರುವ ವಿಚಾರವಲ್ಲ. ಇಲ್ಲಿ ಖಾಸಗೀಕರಣ ಅಥವಾ ಮುಚ್ಚುವುದು-ಎರಡೇ ಆಯ್ಕೆಗಳಿವೆ. ಏರ್ ಇಂಡಿಯಾ ಒಂದು ಪ್ರಥಮ ದರ್ಜೆಯ ಆಸ್ತಿ, ಆದರೆ ಅದು ರೂ. 60,000 ಕೋಟಿ ನಷ್ಟ ಕ್ರೋಢೀಕರಿಸಿದೆ,'' ಎಂದು ಸಚಿವರು ಹೇಳಿದ್ದಾರೆ.

ಇಲ್ಲಿಯ ತನಕ ಸರಕಾರಕ್ಕೆ ದೊರೆತ ಬಿಡ್‍ಗಳ ಕುರಿತು ಮಾತನಾಡಿದ ಅವರು “ಅಂತಿಮಗೊಳಿಸಿದ ಬಿಡ್ಡರ್‍ಗಳಿಗೆ ಮಾಹಿತಿ ನೀಡಲು ಹಾಗೂ ಬಿಡ್‍ಗಳು 64 ದಿನಗಳೊಳಗೆ ಬರಬೇಕೆಂದು ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ, ಈ ಬಾರಿ ಸರಕಾರ ದೃಢ ಮನಸ್ಸಿನಿಂದಿದೆ. ಯಾವುದೇ ಹಿಂಜರಿಕೆಯಿಲ್ಲ,'' ಎಂದು ಹೇಳಿದರು.

ಕೇಂದ್ರ ಸರಕಾರ 2018ರಲ್ಲಿ ಏರ್ ಇಂಡಿಯಾದಲ್ಲಿನ ತನ್ನ ಶೇ 76 ಪಾಲನ್ನು ಮಾರಾಟ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದ್ದರೂ ಇದಕ್ಕೆ ಒಂದೇ ಒಂದು ಬಿಡ್ ಬಂದಿರಲಿಲ್ಲ. ಸದ್ಯ ಸರಕಾರ ಏರ್ ಇಂಡಿಯಾ ಸಂಸ್ಥೆಯಲ್ಲಿ ಶೇ. 100 ಪಾಲು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News