ಬಿಜೆಪಿ ಅಭ್ಯರ್ಥಿಯೊಂದಿಗೆ ಮುಕ್ತ ಚರ್ಚೆಗೆ ಕಮಲ್ ಹಾಸನ್‌ಗೆ ಸ್ಮೃತಿ ಇರಾನಿ ಸವಾಲು
ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ದಕ್ಷಿಣ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ವನತಿ ಶ್ರೀನಿವಾಸನ್ ಅವರೊಂದಿಗೆ ಮುಕ್ತ ಚರ್ಚೆ ನಡೆಸುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಟ ಮತ್ತು ಮಕ್ಕಲ್ ನೀಧಿ ಮೈಯಂ ಸಂಸ್ಥಾಪಕ ಕಮಲ್ ಹಾಸನ್ ಅವರಿಗೆ ಸವಾಲು ಹಾಕಿದ್ದಾರೆ. ಕಮಲ್ ಹಾಸನ್ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಕೊಯಮತ್ತೂರಿನ ಗುಜರಾತಿ ಸಮಾಜದಲ್ಲಿ ಆಯೋಜಿಸಲಾಗಿದ್ದ "ಉತ್ತರ ಭಾರತ ಸಮುದಾಯದ ಕಾರ್ಯಕ್ರಮ" ವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕಿ ಇರಾನಿ, ಕೆಲವು ವರ್ಷಗಳ ಹಿಂದೆ ಕಮಲ್ ಹಾಸನ್ ಅವರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು.
"ವನತಿ ಶ್ರೀನಿವಾಸನ್ ಅವರೊಂದಿಗೆ ಚರ್ಚೆಗೆ ಬರಲು ನಾನು ಕಮಲ್ ಹಾಸನ್ ಗೆ ಸವಾಲು ಹಾಕುತ್ತೇನೆ, ನಿಜವಾಗಿಯೂ ಸಮಸ್ಯೆಗಳನ್ನು ಚೆನ್ನಾಗಿ ತಿಳಿಕೊಂಡಿರುವವರು, ಪರಿಹಾರಗಳನ್ನು ನೀಡುವವರು ಮತ್ತು ನೀತಿಗಳನ್ನು ಕಾರ್ಯಗತಗೊಳಿಸುವವರು ಯಾರು ಎಂದು ಜನರಿಗೆ ಸಾಬೀತುಪಡಿಸಬೇಕಾಗಿದೆ" ಎಂದು ಅವರು ಹೇಳಿದರು.
ಮೂಲಸೌಕರ್ಯ ಅಭಿವೃದ್ಧಿಯ ಅಂಕಿ-ಅಂಶಗಳನ್ನು ಹೊರಹಾಕಿದ ಅವರು, ಕೇಂದ್ರವು ದೇಶಾದ್ಯಂತ 10 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ, ಅದರಲ್ಲಿ 90 ಲಕ್ಷ ತಮಿಳುನಾಡಿನಲ್ಲಿದೆ. ಅಂತೆಯೇ, ಪ್ರಧಾನ ಮಂತ್ರಿ ಜನಧನ್ ಯೋಜನೆಯನ್ನು ಪ್ರಾರಂಭಿಸಿದರು, ಇದರ ಮೂಲಕ ಸರಕಾರವು ನೇರವಾಗಿ ಜನರ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಸಾಧ್ಯವಾಯಿತು, ಇದರಿಂದಾಗಿ ದೇಶಾದ್ಯಂತ 40 ಕೋಟಿ ಜನರಿಗೆ ಪ್ರಯೋಜನವಾಗಿದೆ, ಅದರಲ್ಲಿ 90 ಲಕ್ಷ ಜನರು ತಮಿಳುನಾಡಿನಲ್ಲಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಯಿಂದ ರೈತರಿಗೆ ವಾರ್ಷಿಕವಾಗಿ 6,000 ರೂ.ಸಿಗುತ್ತದೆ, ಅವುಗಳಲ್ಲಿ 10 ಕೋಟಿ ರೈತರು ಲಾಭ ಪಡೆದಿದ್ದು ಅವರಲ್ಲಿ 50 ಲಕ್ಷ ಜನರು ತಮಿಳುನಾಡಿನಲ್ಲಿದ್ದಾರೆ ಎಂದು ಸಚಿವೆ ಹೇಳಿದರು.