ಭಾರತದಲ್ಲಿ ಕೊವೊವ್ಯಾಕ್ಸ್ ಲಸಿಕೆ ಪ್ರಯೋಗ ಆರಂಭ
ಹೊಸದಿಲ್ಲಿ, ಮಾ.27: ಅಮೆರಿಕದ ಲಸಿಕೆ ಉತ್ಪಾದನಾ ಸಂಸ್ಥೆ ನೊವಾವ್ಯಾಕ್ಸ್ ಸಹಯೋಗದಲ್ಲಿ ಭಾರತದಲ್ಲಿ ಸೆರಮ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಗೊಳಿಸಿದ ಕೊರೋನ ಸೋಂಕಿನ ವಿರುದ್ಧದ ಲಸಿಕೆ ಕೊವೊವ್ಯಾಕ್ಸ್‌ನ ಕ್ಲಿನಿಕಲ್ ಪ್ರಯೋಗ ಆರಂಭವಾಗಿದೆ ಎಂದು ಸಂಸ್ಥೆಯ ಸಿಇಒ ಅದರ್ ಪೂನಾವಾಲಾ ಹೇಳಿದ್ದಾರೆ.
ಇಂಗ್ಲೆಂಡಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಬ್ರಿಟನ್ ಮತ್ತು ಆಫ್ರಿಕನ್ ರೂಪಾಂತರಿತ ಸೋಂಕಿನ ವಿರುದ್ಧವೂ ಈ ಲಸಿಕೆ 89.3%ದಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಭಾರತದಲ್ಲಿ ಕೊವೊವ್ಯಾಕ್ಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗ ಆರಂಭವಾಗಿದ್ದು ಸೆಪ್ಟಂಬರ್ ವೇಳೆಗೆ ಜನರ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
ಸೆರಮ್ ಸಂಸ್ಥೆ ಬ್ರಿಟನ್-ಸ್ವೀಡನ್‌ನ ಔಷಧಿ ಸಂಸ್ಥೆ ಅಸ್ಟ್ರಾಝೆನೆಕದ ಸಹಯೋಗದಲ್ಲಿ ಅಭಿವೃದ್ಧಿಗೊಳಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಈಗಾಗಲೇ ಭಾರತದಲ್ಲಿ ಬಳಸಲಾಗುತ್ತಿದೆ. ಕೋವಿಶೀಲ್ಡ್ ಲಸಿಕೆಯನ್ನು ಇತರ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಭಾರತದಲ್ಲಿ 200 ಕೋಟಿ ಡೋಸ್ ಲಸಿಕೆ ಉತ್ಪಾದನೆಗೆ ಸಂಬಂಧಿಸಿ ಕಳೆದ ವರ್ಷದ ಜುಲೈಯಲ್ಲಿ ಅಮೆರಿಕದ ಸಂಸ್ಥೆ ನೊವಾವ್ಯಾಕ್ಸ್ ಮತ್ತು ಸೆರಮ್ ಸಂಸ್ಥೆಯ ಮಧ್ಯೆ ಒಪ್ಪಂದ ಏರ್ಪಟ್ಟಿದೆ. ಕೊವೊವ್ಯಾಕ್ಸ್ ಲಸಿಕೆಯ ಸಣ್ಣಪ್ರಮಾಣದ ಪರೀಕ್ಷೆಯನ್ನು ಭಾರತದಲ್ಲಿ ನಡೆಸುವ ಬಗ್ಗೆ ಜನವರಿಯಲ್ಲಿ ಸೆರಮ್ ಸಂಸ್ಥೆಯು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮೋದನೆ ಕೋರಿತ್ತು. ಆ ಬಳಿಕ ಹೇಳಿಕೆ ನೀಡಿದ್ದ ಆದರ್ ಪೂನಾವಾಲ, ಕೊವೊವ್ಯಾಕ್ಸ್ ಲಸಿಕೆಯ ಪರೀಕ್ಷೆಯನ್ನು ಜೂನ್‌ನಲ್ಲಿ ನಡೆಸುವ ನಿರೀಕ್ಷೆಯಿದೆ ಎಂದಿದ್ದರು.