ಲಾಕ್‌ಡೌನ್ ಪರಿಹಾರವಲ್ಲ, ಕೊರೋನದೊಂದಿಗೇ ಬದುಕುವುದನ್ನು ಕಲಿಯಬೇಕು: ದಿಲ್ಲಿ ಆರೋಗ್ಯ ಸಚಿವ
ಹೊಸದಿಲ್ಲಿ, ಮಾ.27: ಎರಡನೇ ಬಾರಿಗೆ ಲಾಕ್‌ಡೌನ್ ವಿಧಿಸುವುದು ಕೊರೋನ ಸೋಂಕಿನ ಸಮಸ್ಯೆಗೆ ಖಂಡಿತಾ ಪರಿಹಾರವಲ್ಲ. ಕೊರೋನದೊಂದಿಗೇ ಬದುಕುವುದನ್ನು ನಾವು ಕಲಿಯಬೇಕಾಗಿದೆ ಎಂದು ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.
ಶುಕ್ರವಾರದಿಂದ ಶನಿವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ದಿಲ್ಲಿಯಲ್ಲಿ 1,500ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಆರೋಗ್ಯತಜ್ಞರು, ಕೊರೋನದ ಹೊಸ ಸೋಂಕು ತಳಿ ಇನ್ನೂ ಒಂದು ವರ್ಷ ಸಕ್ರಿಯವಾಗಿರುವ ಸಾಧ್ಯತೆಯಿದ್ದು, ಮತ್ತೊಮ್ಮೆ ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುವಂತೆ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸತ್ಯೇಂದರ್ ಜೈನ್, ಲಾಕ್‌ಡೌನ್‌ನ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಲಾಕ್‌ಡೌನ್ ವಿಧಿಸಿರುವ ಹಿಂದೆ ವಿವೇಚನೆಯಿತ್ತು. ಸೋಂಕಿನ ವೈರಸ್ ಹೇಗೆ ಹರಡುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. 21 ದಿನ ಎಲ್ಲಾ ಚಟುವಟಿಕೆ ಸ್ಥಗಿತಗೊಂಡರೆ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ವರದಿಯಾಗಿತ್ತು. ಆದ್ದರಿಂದ ಲಾಕ್‌ಡೌನ್ ಮುಂದುವರಿಯಿತು. ಆದರೂ ಸೋಂಕಿನ ವೈರಸ್ ನಾಶವಾಗಿಲ್ಲ. ಲಾಕ್‌ಡೌನ್ ಪರಿಹಾರವಲ್ಲ ಎಂಬುದು ತನ್ನ ಭಾವನೆ ಎಂದು ಹೇಳಿದರು. ಇದೊಂದು ಆವರ್ತಕ(ಮತ್ತೆ ಮತ್ತೆ ಬರುವ) ಕಾಯಿಲೆಯಾಗಿದ್ದು ತಕ್ಷಣವೇ ನಾಶವಾಗುವ ಸಾಧ್ಯತೆಯಿಲ್ಲ ಎಂದು ತಜ್ಞರು ಆರಂಭದಿಂದಲೇ ಹೇಳುತ್ತಾ ಬಂದಿದ್ದಾರೆ.
ಸೋಂಕು ದೀರ್ಘಾವಧಿಯೂ ಮುಂದುವರಿಯುವುದಾಗಿ ತಜ್ಞರು ಹೇಳಿರುವುದರಿಂದ ಜನತೆ ಕೊರೋನ ವಿರುದ್ಧದ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎರಡು-ಮೂರು ತಿಂಗಳು ಮಾಸ್ಕ್ ಧರಿಸಿದ ಬಳಿಕ ಜನತೆ ನಿರ್ಲಕ್ಷ ತೋರಿದರು. ಆದರೆ ಇದು ಸರಿಯಲ್ಲ, ಮಾಸ್ಕ್ ಧಾರಣೆ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂದವರು ಹೇಳಿದ್ದಾರೆ. ಕೊರೋನ ಲಸಿಕೆ ಪಡೆಯುವ ಸಮಯ ಬಂದಾಗ ಅರ್ಹರು ತಪ್ಪದೇ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವ ಅವಧಿಯನ್ನು ಬೆಳಿಗೆ 9 ಗಂಟೆಯಿಂದ ರಾತಿ 9ರವರೆಗೆ ವಿಸ್ತರಿಸಲಾಗಿದೆ ಎಂದವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.