ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರುವ ಕುರಿತ ಬಿಜೆಪಿ ನಾಯಕ ಮುಕುಲ್ ರಾಯ್ ಚರ್ಚೆಯ ಆಡಿಯೊ ಬಿಡುಗಡೆ ಮಾಡಿದ ಟಿಎಂಸಿ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಇಂದು ನಡೆದ ಮೊದಲ ಹಂತದ ಚುನಾವಣೆ ಅಂತ್ಯವಾಗುತ್ತಲೇ, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಸೋರಿಕೆಯಾದ ಫೋನ್ ಸಂಭಾಷಣೆಗಳ ಬಗ್ಗೆ ಪರಸ್ಪರ ಏಟು-ಎದಿರೇಟು ನೀಡಿವೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪಕ್ಷದ ಮಾಜಿ ಕಾರ್ಯಕರ್ತರೊಬ್ಬರಿಗೆ ಕರೆ ಮಾಡಿ ಪಕ್ಷಕ್ಕೆ ಮರಳಲು ಕೇಳಿಕೊಂಡಿದ್ದಾರೆ ಎಂಬ ಆಡಿಯೋ ಕ್ಲಿಪ್ ನ್ನು ಬಿಡುಗಡೆ ಮಾಡುವ ಮೂಲಕ ಬಿಜೆಪಿ ಇಂದು ಟಿಎಂಸಿಯನ್ನು ಮುಜುಗರಕ್ಕೀಡು ಮಾಡಿತ್ತು.
ಬಿಜೆಪಿಯ ಆಡಿಯೋಗೆ ಪ್ರತಿಯಾಗಿ ತೃಣಮೂಲ ಬಿಡುಗಡೆ ಮಾಡಿದ ಇಬ್ಬರು ಬಿಜೆಪಿ ನಾಯಕರ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್ ವಿರೋಧ ಪಕ್ಷಕ್ಕೆ ಹಾನಿ ವುಂಟು ಮಾಡಬಹುದು ಹಾಗೂ ಚುನಾವಣಾ ಆಯೋಗದ ಪಕ್ಷಪಾತರಹಿತ ನಿಲುವಿಗೆ ಧಕ್ಕೆ ಉಂಟು ಮಾಡಬಹುದು.
ತೃಣಮೂಲ ಪ್ರಕಾರ, ಬಿಜೆಪಿ ಮುಖಂಡ ಶಿಶಿರ್ ಬಜೋರಿಯಾ ಅವರೊಂದಿಗಿನ ಸಂಭಾಷಣೆಯಲ್ಲಿ, ಪಕ್ಷದ ‘ಟ್ರಬಲ್ ಶೂಟರ್’ ಮುಕುಲ್ ರಾಯ್ ಅವರು ಚುನಾವಣಾ ಆಯೋಗದ ಮುಂದೆ ಪ್ರಸ್ತಾವಿಸಬೇಕಾದ ವಿಚಾರಗಳನ್ನು ಪಟ್ಟಿಯಲ್ಲಿ ಸೇರಿಸಲು ಕೇಳಿಕೊಳ್ಳುತ್ತಾರೆ. ಅತ್ಯಂತ ಮುಖ್ಯವಾಗಿ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟ್ ಅಥವಾ ಬೂತ್ ಏಜೆಂಟರ ಬಗ್ಗೆ ಒಂದು ನಿರ್ದಿಷ್ಟ ವಿನಂತಿ ಮಾಡಲು ಹೇಳುತ್ತಾರೆ.
ಮತದಾನದ ದಿನದಂದು ಮತದಾನ ಕೇಂದ್ರಗಳಲ್ಲಿ ಕುಳಿತುಕೊಳ್ಳುವ ಪಕ್ಷದ ಬೂತ್ ಏಜೆಂಟರು ಸಾಮಾನ್ಯವಾಗಿ ಬೂತ್ ಪ್ರದೇಶದ ನಿವಾಸಿಗಳಾಗಿರುತ್ತಾರೆ.
ಬಂಗಾಳದ ಯಾವುದೇ ಮತದಾರರಿಗೆ ರಾಜ್ಯದ ಯಾವುದೇ ಬೂತ್‌ನಲ್ಲಿ ಬೂತ್ ಏಜೆಂಟರಾಗಲು ಅನುಮತಿ ನೀಡುವ ಆಡಳಿತಾತ್ಮಕ ಆದೇಶಗಳನ್ನು ರವಾನಿಸಲು ಚುನಾವಣಾ ಆಯೋಗವನ್ನು ಕೋರಬೇಕು ಎಂದು ರಾಯ್ ಅವರು ಸಂಭಾಷಣೆಯಲ್ಲಿ ಹೇಳಿದ್ದಾರೆ.
ನಾವು ಇದನ್ನು ಚುನಾವಣಾ ಆಯೋಗದಿಂದ ಮಾಡಿಸದಿದ್ದರೆ, ಬಿಜೆಪಿಗೆ ಅನೇಕ ಬೂತ್‌ಗಳಲ್ಲಿ ಏಜೆಂಟರನ್ನು ಕೂರಿಸಲು ಸಾಧ್ಯವಾಗುವುದಿಲ್ಲ ಎಂದು ರಾಯ್ ಅವರು ಶಿಶಿರ್ ಬಜೋರಿಯಾಗೆ ಹೇಳಿದ್ದಾರೆ.
ಕಳೆದ ವಾರ, ಚುನಾವಣಾ ಆಯೋಗವು ಬಂಗಾಳ ಮತದಾರರಿಗೆ ರಾಜ್ಯದ ಎಲ್ಲಿಯಾದರೂ ಬೂತ್ ಏಜೆಂಟರಾಗಲು ಅವಕಾಶ ನೀಡುವ ಆದೇಶವನ್ನು ಜಾರಿಗೊಳಿಸಿತು.
ಚುನಾವಣಾ ಆಯೋಗದ ಈ ಆದೇಶವನ್ನು ರದ್ದುಗೊಳಿಸುವಂತೆ ತೃಣಮೂಲ ಆಗ್ರಹಿಸುತ್ತಿದ್ದು, ಸಂಸದ ಸುದೀಪ್ ಬಂಡೋಪಾಧ್ಯಾಯ ನೇತೃತ್ವದ ಪಕ್ಷದ ನಿಯೋಗ ಶನಿವಾರ ಆಯೋಗವನ್ನು ಭೇಟಿಯಾಗಿ ತಮ್ಮ ಮನವಿಯನ್ನು ಪುನರುಚ್ಚರಿಸಿತು.